ಕರ್ನಾಟಕ

karnataka

ETV Bharat / lifestyle

ಸ್ಟೆಮ್ ಸೆಲ್ ಕಸಿಯಿಂದ ಏಡ್ಸ್​ ರೋಗ ಗುಣ: ವಿಶ್ವದಲ್ಲಿ ಮಹಿಳೆಯ ಮೊದಲ ಪ್ರಯೋಗ ಯಶಸ್ವಿ

ಅಮೆರಿಕದ ಡೆನ್ವರ್‌ನಲ್ಲಿ ನಡೆದ ಕಾನ್ಫರೆನ್ಸ್ ಆನ್ ರೆಟ್ರೊವೈರಸಸ್​ ಆ್ಯಂಡ್ ಆಪರ್ಚುನಿಸ್ಟಿಕ್ ಇನ್ಫೆಕ್ಷನ್ ಸಮ್ಮೇಳನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗಿದ್ದು, ಈ ಚಿಕಿತ್ಸಾ ನೂತನ ವಿಧಾನದ ಮೂಲಕ ಹೆಚ್ಚಿನ ಜನರನ್ನು ಹೆಚ್​​ಐವಿಯಿಂದ ಗುಣಪಡಿಸಬಹುದಾಗಿದೆ.

women HIV patient cured by stem cell Therapy
ಸ್ಟೆಮ್ ಸೆಲ್ ಕಸಿಯಿಂದ ಏಡ್ಸ್​ ರೋಗ ಗುಣ: ವಿಶ್ವದಲ್ಲಿ ಮಹಿಳೆಯ ಮೊದಲ ಪ್ರಯೋಗ ಯಶಸ್ವಿ

By

Published : Feb 17, 2022, 12:43 PM IST

ಚಿಕಾಗೋ(ಅಮೆರಿಕ):ಆರೋಗ್ಯವಂತ ವ್ಯಕ್ತಿಯ ದೇಹದಿಂದ ರೋಗಿಯ ದೇಹಕ್ಕೆ ಕೆಲವೊಂದು ಜೀವಕೋಶಗಳನ್ನು ತಲುಪಿಸುವ ಮೂಲಕ ರೋಗಿಯನ್ನು ನಿರ್ದಿಷ್ಟ ರೋಗದಿಂದ ಗುಣಪಡಿಸಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಎಲ್ಲಾ ರೋಗಗಳಿಗೆ ಕಾರ್ಯ ಸಾಧುವಲ್ಲವಾದರೂ, ಕೆಲವೊಂದು ರೋಗಗಳ ವಿರುದ್ಧ ಈ ವಿಧಾನ ಯಶಸ್ವಿಯಾಗಿ ಕೆಲಸ ಮಾಡುತ್ತದೆ.

ಇತ್ತೀಚೆಗೆ ಕೋವಿಡ್ ವಿರುದ್ಧವೂ ಪ್ಲಾಸ್ಮಾ ಥೆರಪಿ ಎಂಬ ಹೆಸರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಕಾಂಡಕೋಶಗಳು ಅಥವಾ ಸ್ಟೆಮ್​ ಸೆಲ್​ಗಳು ಎಂದು ಕರೆಯಲ್ಪಡುವ ಜೀವಕೋಶಗಳನ್ನು ಕಸಿ ಮಾಡುವ ಮೂಲಕ, ಕೆಲವೊಂದು ರೋಗಗಳನ್ನ ಯಶಸ್ವಿಯಾಗಿ ಗುಣಪಡಿಸಬಹುದಾಗಿದೆ. ಏಡ್ಸ್​ ಅನ್ನು ಕೂಡಾ ಸ್ಟೆಮ್ ಸೆಲ್ ಕಸಿಯ ಮೂಲಕ ಗುಣಪಡಿಸಬಹುದು ಅನ್ನೋದು ಅಚ್ಚರಿಯಾದರೂ ಸತ್ಯ.

ಈ ಮೊದಲು ಇಬ್ಬರು ರೋಗಿಗಳನ್ನು ಇದೇ ರೀತಿಯ ಕಸಿ ಮಾಡುವ ಮೂಲಕ ಗುಣಪಡಿಸಲಾಗಿತ್ತು. ಈಗ ಮಹಿಳೆಯೊಬ್ಬರನ್ನು ಹೆಚ್​ಐವಿ ಸೋಂಕಿನಿಂದ ಗುಣಪಡಿಸಲಾಗಿದೆ. ಈ ಮೂಲಕ ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಹೆಚ್​ಐವಿ ಸೋಂಕಿನಿಂದ ಚೇತರಿಕೆ ಕಂಡ ಮೊದಲ ಮಹಿಳೆ ಇವರಾಗಿದ್ದಾರೆ.

ಹೌದು, ಅಮೆರಿಕ ಮೂಲದ ರೋಗಿಯನ್ನು ಹೆಚ್​ಐವಿ ಸೋಂಕಿನಿಂದ ಗುಣಪಡಿಸಲಾಗಿದ್ದು, ಆಕೆ ಲ್ಯುಕೇಮಿಯಾ ರೋಗದಿಂದಲೂ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಹೆಚ್​​ಐವಿ ಸೋಂಕನ್ನು ಈಗಾಗಲೇ ಜಯಿಸಿದ್ದ ವ್ಯಕ್ತಿಯೊಬ್ಬರ ಸ್ಟೆಮ್ ಸೆಲ್ ಅನ್ನು 'ದಾನ' ಪಡೆದುಕೊಂಡು ಮಹಿಳೆಗೆ ನೀಡಿ, ಆಕೆಯನ್ನು ಹೆಚ್​ಐವಿಯಿಂದ ಗುಣಪಡಿಸಲಾಗಿದೆ.

ಡೆನ್ವರ್‌ನಲ್ಲಿ ನಡೆದ ಕಾನ್ಫರೆನ್ಸ್ ಆನ್ ರೆಟ್ರೊವೈರಸಸ್​ ಆ್ಯಂಡ್ ಆಪರ್ಚುನಿಸ್ಟಿಕ್ ಇನ್ಫೆಕ್ಷನ್ ಸಮ್ಮೇಳನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗಿದ್ದು, ಈ ಚಿಕಿತ್ಸಾ ನೂತನ ವಿಧಾನದ ಮೂಲಕ ಹೆಚ್ಚಿನ ಜನರನ್ನು ಹೆಚ್​​ಐವಿಯಿಂದ ಗುಣಪಡಿಸಬಹುದಾಗಿದೆ.

ಇದನ್ನೂ ಓದಿ:ಲಸ್ಸಾ ಜ್ವರ ನಿಜಕ್ಕೂ ಗಂಭೀರವೇ?.. ಇದರ ಲಕ್ಷಣಗಳೇನು ಗೊತ್ತೇ?

ಆಕೆಗೆ ಹೊಕ್ಕುಳ ಬಳ್ಳಿಯಿಂದ ತೆಗೆದ ಸ್ಟೆಮ್ ಸೆಲ್ ಕಸಿ ಮಾಡಿದಾಗಿನಿಂದ, ಆಕೆಯಲ್ಲಿ ಹೆಚ್​ಐವಿ ಪ್ರಭಾವ ಕಡಿಮೆಯಾಗುತ್ತಾ ಬಂದಿದ್ದು, 14 ತಿಂಗಳಲ್ಲಿ ಆಕೆಯಲ್ಲಿ ಹೆಚ್​ಐವಿ ವೈರಸ್ ನಾಪತ್ತೆಯಾಗಿದೆ. ಈ ಮೂಲಕ ಹೆಚ್​​ಐವಿಗೆ ಆ್ಯಂಟಿ ವೈರಲ್ ಥೆರಪಿಯಂಥ ಪ್ರಬಲ ಚಿಕಿತ್ಸಾ ವಿಧಾನಗಳು ಅವಶ್ಯಕತೆ ಇಲ್ಲವೆಂದು ತಿಳಿದುಬಂದಿದೆ.

ಮೊದಲೇ ಹೇಳಿದಂತೆ ಹಿಂದಿನ ಬಾರಿ ಇಬ್ಬರು ಪುರುಷರಿಗೆ ಅಸ್ಥಿಮಜ್ಜೆಯ (ಬೋನ್ ಮ್ಯಾರೋ) ಸ್ಟೆಮ್ ಸೆಲ್ ಕಸಿ ಮಾಡಿ ಹೆಚ್​​​ಐವಿಯಿಂದ ಗುಣಪಡಿಸಲಾಗಿತ್ತು. ಓರ್ವ ವ್ಯಕ್ತಿ ಶ್ವೇತವರ್ಣದ ವ್ಯಕ್ತಿಯಾದರೆ, ಮತ್ತೊಬ್ಬ ವ್ಯಕ್ತಿ ಲ್ಯಾಟಿನ್ ವ್ಯಕ್ತಿಯಾಗಿದ್ದನು. ಈಗ ಏಡ್ಸ್​ನಿಂದ ಚೇತರಿಕೆ ಕಂಡಿರುವ ಮಹಿಳೆ ಕಪ್ಪು ಮತ್ತು ಬಿಳಿ ವರ್ಣಗಳ ಮಿಶ್ರಣವಾಗಿದ್ದಾರೆ ಎಂದು ಇಂಟರ್​ನ್ಯಾಷನಲ್ ಏಡ್ಸ್​ ಸೊಸೈಟಿ ಅಧಿಕೃತ ಹೇಳಿಕೆ ನೀಡಿದೆ.

ಕ್ಯಾಲಿಫೋರ್ನಿಯಾ ಲಾಸ್ ಏಂಜಲೀಸ್ ವಿಶ್ವವಿದ್ಯಾಲಯದ (UCLA) ಡಾ. ವೈವೊನ್ನೆ ಬ್ರೈಸನ್ ಮತ್ತು ಬಾಲ್ಟಿಮೋರ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಡಾ.ಡೆಬೊರಾ ಪರ್ಸೌಡ್ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಕ್ಯಾನ್ಸರ್ ಮತ್ತು ಇತರ ಗಂಭೀರ ರೋಗಗಳಿಗೆ ಸ್ಟೆಮ್​ ಸೆಲ್​ಗಳನ್ನು ಕಸಿ ಮಾಡಿ ಸುಮಾರು 25 ಮಂದಿಯನ್ನು ಹೆಚ್​ಐವಿಯಿಂದ ಗುಣಪಡಿಸುವ ಗುರಿಯನ್ನು ಈಗ ಹೊಂದಲಾಗಿದೆ.

ಸ್ಟೆಮ್ ಸೆಲ್ ಥೆರಪಿ ಹೇಗೆ ಮಾಡಲಾಗುತ್ತದೆ?

ಮೊದಲು ರೋಗಿಗಳಿಗೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಕಿಮೋಥೆರಫಿ ಮಾಡಲಾಗುತ್ತದೆ. ನಂತರ ಅವರ ಸ್ಟೆಮ್​ ಸೆಲ್​ಗಳನ್ನು ಮೂಳೆ ಅಥವಾ ಹೊಕ್ಕಳ ಬಳ್ಳಿಯ ರಕ್ತದಿಂದ ಪಡೆದು, ಅವುಗಳನ್ನು ದಾನಿಗಳು ನೀಡಿದ ಆರೋಗ್ಯಕರ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದ ಸ್ಟೆಮ್ ಸೆಲ್​ಗಳನ್ನು ಕಸಿ ಮಾಡುತ್ತಾರೆ. ನಂತರ ರೋಗಿಯ ದೇಹಕ್ಕೆ ಕಸಿ ಮಾಡಿದ ಸೆಲ್​ಗಳನ್ನು ನೀಡುತ್ತಾರೆ. ಈ ಸ್ಟೆಮ್ ಸೆಲ್​ಗಳು ರೋಗಿಯ ವೈರಸ್​ಗಳ ವಿರುದ್ಧ ಹೋರಾಡಿ ರೋಗದಿಂದ ಮುಕ್ತಗೊಳಿಸುತ್ತವೆ.

ABOUT THE AUTHOR

...view details