ಬೆಂಗಳೂರು:ವಿದ್ಯಾವಂತರು, ವೃತ್ತಿ ನಿರತ ಮಹಿಳೆಯರು ತಡವಾಗಿ ವಿವಾಹವಾಗುವ ಮತ್ತು ಗರ್ಭಧಾರಣೆಯನ್ನು ವಿಳಂಬಗೊಳಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿರುವುದರಿಂದ ಬಂಜೆತನ ಪ್ರಮಾಣ ಹೆಚ್ಚಾಗುತ್ತಿದೆ. ಇದರ ಪರಿಣಾಮ ಅವರು ಸ್ವಾಭಾವಿಕವಾಗಿ ಗರ್ಭಿಣಿಯರಾಗಲು ಕಷ್ಟಪಡುವಂತಾಗಿದೆ.
ದಂಪತಿಗಳು ಅಸಿಸ್ಟೆಡ್ ರೀಪ್ರೊಡಕ್ಟಿವ್ ಟೆಕ್ನಾಲಾಜಿಗಳನ್ನು(ಎಆರ್ಟಿ) ಯನ್ನು ಬಳಕೆ ಮಾಡುತ್ತಿರುವುದರಿಂದ ಬಂಜೆತನದ ಪ್ರಮಾಣ ಪ್ರತಿವರ್ಷ 5-10% ರಷ್ಟು ಹೆಚ್ಚಳವಾಗುತ್ತಿದೆ ಎಂದು ಲ್ಯಾಪರೋಸ್ಕೋಪಿಕ್ ಸರ್ಜನ್ ಮತ್ತು ಫರ್ಟಿಲಿಟಿ ತಜ್ಞೆ ಡಾ.ವಿದ್ಯಾ ವಿ.ಭಟ್ ಹೇಳಿದ್ದಾರೆ.
ವಿಳಂಬವಾಗಿ ವಿವಾಹವಾಗುವುದು, ವೃತ್ತಿಜೀವನದ ಬಗ್ಗೆ ಹೆಚ್ಚು ಗೀಳು ಮತ್ತು ಆಧುನಿಕ ಗರ್ಭನಿರೋಧಕಗಳ ಬಳಕೆಯಿಂದ ಭಾರತೀಯ ಮಹಿಳೆಯರಲ್ಲಿ ಫಲವತ್ತತೆ ಕಡಿಮೆಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದಲ್ಲದೇ, ಭಾರತೀಯ ಮಹಿಳೆಯರಲ್ಲಿ ಗರ್ಭಧಾರಣೆಯನ್ನು ಮುಂದೂಡುತ್ತಿರುವ ಹೊಸ ಬೆಳವಣಿಗೆ ಕಂಡು ಬರುತ್ತಿದೆ.
ಗರ್ಭಧಾರಣೆ ಪ್ರಮಾಣ ಕುಂಠಿತ
ನಗರ ಪ್ರದೇಶದ ಅಂಕಿಅಂಶಗಳನ್ನು ಅವಲೋಕಿಸಿದರೆ ಗರ್ಭಧಾರಣೆ ವಯಸ್ಸು ಸರಾಸರಿ 35 ಮತ್ತು ಅದಕ್ಕಿಂತ ಹೆಚ್ಚಿರುತ್ತದೆ. ಇದರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಿಳೆಯರಲ್ಲಿ ವಯಸ್ಸು ಹೆಚ್ಚಾದಂತೆ, ಅವರು ಗರ್ಭಿಣಿಯಾಗುವ ಸಾಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಇದಕ್ಕೆ ಪ್ರಮುಖ ಕಾರಣ ಲೈಂಗಿಕ ಸಂಭೋಗ ಆವರ್ತನವು ಕಡಿಮೆಯಾಗುವುದು. ಗರ್ಭಾಶಯದ ಕಡಿಮೆ ಗುಣಮಟ್ಟ ಮತ್ತು ಮೊಟ್ಟೆಯಲ್ಲಿನ ಬೆಳವಣಿಗೆ ಸಾಮರ್ಥ್ಯ ಕ್ಷೀಣಿಸುವುದರಿಂದ ಭ್ರೂಣದ ಬೆಳವಣಿಗೆಯು ಕುಂಠಿತವಾಗುತ್ತದೆ.
35 ವರ್ಷದ ನಂತರ ಗರ್ಭವತಿಯಾದರೂ ಮೊಟ್ಟೆಯ ಕೋಶಗಳ ಅಂತರ್ಗತ ಫಲವತ್ತತೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಈ ಫಲವತ್ತತೆಯ ಕುಸಿತವು ಸುಮಾರು 32 ವರ್ಷದಿಂದ ಆರಂಭವಾಗುತ್ತದೆ. ಇದು ಸುಮಾರು 37 ವರ್ಷದ ನಂತರ ವೇಗವಾಗಿರುತ್ತದೆ. ಹೀಗಾಗಿ ಮಹಿಳೆಯರು 25 ರಿಂದ 33 ವರ್ಷದೊಳಗೆ ಮಕ್ಕಳಿಗೆ ಜನ್ನ ನೀಡುವುದು ಉತ್ತಮ. ಇದಕ್ಕಿಂತ ಹೆಚ್ಚು ವರ್ಷಗಳವರೆಗೆ ಗರ್ಭಧಾರಣೆಯನ್ನು ವಿಳಂಬ ಮಾಡಿದರೆ ಅಂತಹ ಮಹಿಳೆಯರು ಗರ್ಭಧರಿಸಲು ಕಷ್ಟವಾಗಲಿದೆ ಎಂದು ಡಾ.ವಿದ್ಯಾ ವಿ.ಭಟ್ ಎಚ್ಚರಿಕೆ ನೀಡಿದ್ದಾರೆ.
ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ
ವಿಳಂಬವಾಗಿ ಗರ್ಭ ಧರಿಸುವುದರಿಂದ ಗರ್ಭಿಣಿಯರಲ್ಲಿ ಗರ್ಭಾವಸ್ಥೆಯ ವೇಳೆ ಮಧುಮೇಹ ಪ್ರಕರಣಗಳು ಹೆಚ್ಚಳವಾಗಬಹುದು. ಇದು ಕೆಲವೊಮ್ಮೆ ಟೈಪ್ 2 ಮಧುಮೇಹವಾಗಿ ಬದಲಾಗುತ್ತದೆ. ಅಲ್ಲದೇ, ತಡವಾಗಿ ಗರ್ಭ ಧರಿಸುವಂತಹ ಮಹಿಳೆಯರು ತಮ್ಮ ಗರ್ಭಧಾರಣೆಯ ಆರಂಭದಿಂದಲೂ ದೀರ್ಘಕಾಲದ ಅಧಿಕ ರಕ್ತದೊತ್ತಡದಿಂದ ಬಳಲುವ ಸಾಧ್ಯತೆಗಳು ಹೆಚ್ಚಾಗಿವೆ. ಮಹಿಳೆಯರು ಪ್ರಸವದ ವೇಳೆ ಹಲವಾರು ಸಮಸ್ಯೆಗಳನ್ನೂ ಎದುರಿಸಬಹುದು.
ಉದಾಹರಣೆಗೆ ಹೆರಿಗೆಯಲ್ಲಿ ಪ್ರಗತಿ ಕಾಣದಿರುವುದು ಮತ್ತು ಭ್ರೂಣದ ತಲೆಯ ಮೂಲದಿಂದ ಕೆಳಗಿಳಿಯದೇ ಇರುವುದು. ಅದೇ ರೀತಿ 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಸ್ವಾಭಾವಿಕವಾಗಿ ಗರ್ಭಪಾತದ ಅಪಾಯವಿರುತ್ತದೆ. ಮಗುವಿನಲ್ಲಿ ಕ್ರೋಮೋಸೋಮಲ್ ವೈಪರೀತ್ಯಗಳು ಕಂಡು ಬರುವ ಸಾಧ್ಯತೆಗಳಿದ್ದರೆ, ಬೊಜ್ಜು ಫಲವತ್ತತೆಗೆ ಸಂಬಂಧಿಸಿದಂತೆ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಗರ್ಭವತಿಯಾದ ಸಂದರ್ಭದಲ್ಲಿ ಮಹಿಳೆಯ ತೂಕ ಅಧಿಕವಾದರೆ ಮೆಟಬಾಲಿಕ್ ಸಿಂಡ್ರೋಮ್ ಮತ್ತು ಪುನರಾವರ್ತಿತ ಗರ್ಭಧಾರಣೆಯ ನಷ್ಟವನ್ನು ಎದುರಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬುದು ವಿದ್ಯಾರ ಸ್ಪಷ್ಟನೆ.
ಸೊಸೈಟಿ ಆಫ್ ಅಸಿಸ್ಟೆಡ್ ರೀಪ್ರೊಡಕ್ಟಿವ್ ಟೆಕ್ನಾಲಜಿಯ ಅಂಕಿಅಂಶಗಳ ಪ್ರಕಾರ, ಭಾರತೀಯ ಮಹಿಳೆಯರಲ್ಲಿ 35 ವರ್ಷದೊಳಗಿನವರಲ್ಲಿ ಐವಿಎಫ್‍ನ ಯಶಸ್ಸು ಪ್ರಮಾಣ 55.6% ರಷ್ಟಿದ್ದರೆ, 35-37ರ ವಯೋಮಾನದ ಮಹಿಳೆಯರಲ್ಲಿ ಇದು 40.8% ಕ್ಕೆ ಇಳಿದಿದ್ದರೆ, 38-40 ರ ವಯೋಮಾನದಲ್ಲಿ 12.6% ರಷ್ಟು ಮತ್ತು ಇದಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ 3.9% ರಷ್ಟಿದೆ. ಇನ್ನು ಬಾಡಿಗೆ ತಾಯ್ತನದ ಪ್ರಕರಣಗಳಲ್ಲಿ ಭ್ರೂಣ ವರ್ಗಾವಣೆಯಿಂದ ಗರ್ಭಧಾರಣೆಯ ಯಶಸ್ಸಿನ ಪ್ರಮಾಣ 53.6% ರಷ್ಟಿದೆ.