ಪಾಟ್ನಾ: ಇಡೀ ದೇಶವು ಕೊರೊನಾ ಮಹಾಮಾರಿಯಿಂದ ಬಾಧಿತವಾಗಿದ್ದು, ಬಿಹಾರ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಕೊರೊನಾ ನಿರ್ಮೂಲನೆಯಾಗುವ ಮುನ್ನವೇ ಈಗ ಇನ್ನೊಂದು ರೋಗ ಹರಡುವ ಆತಂಕ ಎದುರಾಗಿದೆ. ಬ್ಲ್ಯಾಕ್ ಫಂಗಸ್ ಎಂಬ ಸೋಂಕು ಇತ್ತೀಚಿನ ದಿನಗಳಲ್ಲಿ ಬಿಹಾರದಲ್ಲೂ ಕಾಣಿಸಿಕೊಂಡಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಕನಿಷ್ಠ 20 ಜನರಿಗೆ ಈ ಸೋಂಕು ತಗುಲಿರುವುದಾಗಿ ವರದಿಯಾಗಿದೆ.
ಬಿಹಾರದ ಪಾಟ್ನಾ ಏಮ್ಸ್ನಲ್ಲಿ 7, ರೂಬನ್ ಆಸ್ಪತ್ರೆಯಲ್ಲಿ 2, ಪಾರಸ್ ಆಸ್ಪತ್ರೆಯಲ್ಲಿ 2, ಐಜಿಐಎಂಎಸ್ ನಲ್ಲಿ 4, ವೆಲ್ಲೋರ ಇ ಎನ್ ಟಿ ಕೇಂದ್ರದಲ್ಲಿ 3 ಮತ್ತು ಕೈಮೂರ ಆಸ್ಪತ್ರೆಯಲ್ಲಿ ಒಂದು ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿವೆ. ಇನ್ನು ರಾಜ್ಯದ ಇನ್ನೂ ಕೆಲ ಆಸ್ಪತ್ರೆಗಳಲ್ಲಿ ಇದೇ ರೀತಿಯ ಪ್ರಕರಣಗಳು ಕಂಡು ಬಂದಿರುವುದಾಗಿ ವರದಿಯಾಗಿದೆ.
"ಬ್ಲ್ಯಾಕ್ ಫಂಗಸ್ ಎಂಬುದು ಫಂಗಸ್ನಿಂದ ಬರುವ ರೋಗವಾಗಿದ್ದು, ವ್ಯಕ್ತಿಯ ರೋಗ ನಿರೋಧಕ ಶಕ್ತಿಯು ಗಣನೀಯವಾಗಿ ಕಡಿಮೆಯಾದಾಗ ಈ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೂಗು, ಬಾಯಿ ಅಥವಾ ಶರೀರದ ಮೇಲಾದ ಗಾಯದ ಮೂಲಕ ಈ ಫಂಗಸ್ ದೇಹವನ್ನು ಪ್ರವೇಶಿಸುತ್ತದೆ. ಮೂಗಿನಿಂದ ಸತತವಾಗಿ ನೀರು ಮತ್ತು ರಕ್ತ ಸೋರುವುದು ಹಾಗೂ ಕಪ್ಪು ಸಿಂಬಳ ಜಮಾಯಿಸುವುದು, ಕಣ್ಣುರಿ ಹಾಗೂ ಕಣ್ಣು ಮಂಜಾಗುವುದು ಈ ರೋಗದ ಲಕ್ಷಣಗಳಾಗಿವೆ." ಎಂದು ಪಾಟ್ನಾ ಏಮ್ಸ್ ಉಪಾಧೀಕ್ಷಕ ಡಾ. ಅನಿಲ ಕುಮಾರ ಮಾಹಿತಿ ನೀಡಿದರು.