ವಾಷಿಂಗ್ಟನ್( ಅಮೆರಿಕ): ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತನ್ನು ಆರ್ಥಿಕವಾಗಿ ತಲ್ಲಣಗೊಳ್ಳುವಂತೆ ಮಾಡಿದ್ದ ಕೋವಿಡ್ ಭವಿಷ್ಯದಲ್ಲೂ ಸೋಂಕಿತ ಮಕ್ಕಳನ್ನು ಕಾಡಲಿದೆ ಎಂದು ಸಂಶೋಧನೆಯೊಂದು ಮಾಹಿತಿ ಬಿಡುಗಡೆ ಮಾಡಿದೆ.
ಅಮೆರಿಕ, ಮೆಕ್ಸಿಕೋ ಹಾಗೂ ಸ್ವೀಡನ್‌ನ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ನಡೆಸಿರುವ ಅಧ್ಯಯನದಲ್ಲಿ ಕೊರೊನಾ ಸೋಂಕಿನ ನಂತರ ಮಕ್ಕಳು ಮತ್ತು ಹದಿಹರೆಯದವರಲ್ಲಿ ದೀರ್ಘವಾದ ಕೋವಿಡ್ ಹರಡುವಿಕೆಯು ಶೇ. 25.24ರಷ್ಟು ಇರಲಿದೆ ಎಂಬುದನ್ನು ಕಂಡು ಹಿಡಿದಿದೆ. ಇದರ ಜೊತೆಗೆ ಮಕ್ಕಳು ಮತ್ತು ಹದಿಹರೆಯದವರಲ್ಲಿ ಕೋವಿಡ್‌ಗೆ ಸಂಬಂಧಿಸಿದ 40ಕ್ಕೂ ಹೆಚ್ಚು ದೀರ್ಘಕಾಲೀನ ಪರಿಣಾಮಗಳನ್ನೂ ಈ ತಂಡವು ಗುರುತಿಸಿದ್ದು, ಇದರಲ್ಲಿ ಪ್ರಮುಖ ಐದನ್ನು ಇಲ್ಲಿ ನೀಡಲಾಗಿದೆ.
ಮನಸ್ಥಿತಿ ಸರಿ ಇಲ್ಲದಿರುವಿಕೆ (ಶೇ.16.50), ಆಯಾಸ (ಶೇ.9.66), ನಿದ್ರಾಹೀನತೆ (ಶೇ.8.42), ತಲೆನೋವು (ಶೇ.7.84) ಹಾಗೂ ಉಸಿರಾಟದ ಲಕ್ಷಣಗಳು (ಶೇ.7.62). ಈ ಐದು ಅತ್ಯಂತ ಪ್ರಚಲಿತ ವೈದ್ಯಕೀಯ ಸಮಸ್ಯೆಯ ಲಕ್ಷಣವಾಗಿವೆ. ಹೆಚ್ಚಿನ ರೋಗಲಕ್ಷಣಗಳು ಕೆಲ ದಿನಗಳ ಬಳಿಕ ಸುಧಾರಿಸಿದರೂ ಸೋಂಕು ತಗುಲಿದ ಒಂದು ವರ್ಷದ ನಂತರ ಕೆಲವು ರೋಗಲಕ್ಷಣಗಳು ಮುಂದುವರಿಯಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಇದಕ್ಕೆ ಹಲವು ಸಾಕ್ಷ್ಯಗಳನ್ನು ಒದಗಿಸಿದ್ದಾರೆ.