ರಷ್ಯಾ/ನವದೆಹಲಿ :ಎಲ್ಲೆಡೆ ಕೋವಿಡ್ ಪ್ರಕರಣಗಳು, ರೂಪಾಂತರಿ ಒಮಿಕ್ರಾನ್ ಕೇಸ್ಗಳು ಏರಿಕೆಯಾಗುತ್ತಿವೆ. ಜನರು ಮತ್ತೆ ಆತಂಕಕ್ಕೊಳಗಾಗುತ್ತಿದ್ದಾರೆ. ಪ್ರಕರಣಕ್ಕನುಗುಣವಾಗಿ ನಿಯಮಾವಳಿಗಳನ್ನು ಪುನಃ ಚುರುಕುಗೊಳಿಸಲಾಗಿದೆ. ಯಾವಾಗ ಈ ಸೋಂಕು ಸಮಸ್ಯೆ ತೊಲಗುವುದೋ ಎಂಬ ಚಿಂತೆಯಲ್ಲಿ ಜನರಿದ್ದು, ತಜ್ಞರು ವಿಭಿನ್ನವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ರಷ್ಯಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗೆನ್ನಡಿ ಒನಿಶ್ಚೆಂಕೊ (Russia's former chief sanitary doctor Gennady Onishchenko) ಪ್ರಕಾರ, ಕೋವಿಡ್ ಮಾರ್ಗಸೂಚಿ, ಲಸಿಕಾಭಿಯಾನವನ್ನು ಗಮನಿಸಿದರೆ ಸದ್ಯದ ಕೋವಿಡ್ ಪರಿಸ್ಥಿತಿ ಮೇ ವೇಳೆಗೆ ಕೊನೆಗೊಳ್ಳಬಹುದು. ಸೀಸನಲ್ ಎಪಿಡೆಮಿಕ್/ಋತುಮಾನದ ಸಾಂಕ್ರಾಮಿಕ ರೋಗ ಆಗಬಹುದು ಅಂತಾ ಹೇಳಿದ್ದಾರೆಂದು ಟಿಎಎಸ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲಸಿಕೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಎಲ್ಲೆಡೆ ಲಸಿಕಾಭಿಯಾನ ಚುರುಕುಗೊಂಡಿದೆ. ಅತಿ ಹೆಚ್ಚು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆಯತ್ತ ಗಮನಹರಿಸುವುದು ಅಗತ್ಯ. ಆದರೆ, ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗವು ಇನ್ನೂ ಋತುಮಾನದ ಸಾಂಕ್ರಾಮಿಕ ರೋಗವಾಗಿ ರೂಪಾಂತರಗೊಳ್ಳುತ್ತದೆ ಎಂದು ರಷ್ಯಾದ ಅಕಾಡೆಮಿ ಆಫ್ ಸೈನ್ಸ್ ಅಧ್ಯಕ್ಷ ಅಲೆಕ್ಸಾಂಡರ್ ಸೆರ್ಗೆಯೆವ್ (Russian Academy of Sciences President Alexander Sergeyev) ಕೂಡ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.