ನವದೆಹಲಿ: ಇಸ್ರೇಲ್ ಮೂಲದ ಪೆಗಾಸಸ್ ಎಂಬ ಸ್ಪೈವೇರ್ ಅಪ್ಲಿಕೇಶನ್ ದೇಶದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈಗ ದೊರೆತಿರುವ ಮಾಹಿತಿ ಪ್ರಕಾರ, ಈ ಸಾಫ್ಟ್ವೇರ್ ಅನ್ನು ರಹಸ್ಯವಾಗಿ ಉದ್ದೇಶಿತ ಫೋನ್ ಅಥವಾ ಕಂಪ್ಯೂಟರ್ನಲ್ಲಿ ಇನ್ಸ್ಟಾಲ್ ಮಾಡಿದರೆ, ರಿ ಸೆಟ್ಟಿಂಗ್ ಅಥವಾ ರಿ ಬೂಟಿಂಗ್ ಮೂಲಕ ಅದನ್ನು ಅಳಿಸಿ ಹಾಕಲು ಸಾಧ್ಯವಿಲ್ಲ.
ಸಂಪುಟ ಸಚಿವರು ಸೇರಿದಂತೆ ಪ್ರಮುಖ ರಾಜಕಾರಣಿಗಳು, ನ್ಯಾಯಾಧೀಶರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯರ್ತರ ಮೇಲೆ ಇಸ್ರೇಲ್ ಮೂಲದ ಪೆಗಾಸಸ್ ಸಾಫ್ಟ್ವೇರ್ ಮೂಲಕ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎಂಬ ಪ್ರತಿಪಕ್ಷಗಳ ಆರೋಪ ದೇಶದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ.
ದಿ ವೈರ್ ಸೇರಿದಂತೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ಕಾರ್ಯಾಚರಣೆ ನಡೆಸಿ ಪೆಗಾಸಸ್ ದಾಳಿಯ ಬಗ್ಗೆ ಬಹಿರಂಗಪಡಿಸಿದ ಬಳಿಕ, ಇದರ ಬಗ್ಗೆ ಜನರಿಗೆ ಕುತೂಹಲ ಹೆಚ್ಚಾಗಿದೆ. ಹಾಗಾಗಿ ಪೆಗಾಸಸ್ ಬಗ್ಗೆ ಮಾಹಿತಿ ಹುಡುಕಾಟ ಹೆಚ್ಚಾಗಿದೆ. ಹುಡುಕುತ್ತಾ ಹೋದಂತೆ ಪೆಗಾಸಸ್ ಬಗ್ಗೆ ಹಲವು ಮಾಹಿತಿಗಳು ಲಭ್ಯವಾಗುತ್ತಿದೆ.
ಓದಿ : 'ಪೆಗಾಸಸ್' ಫೋನ್ ನಂಬರ್ ಹ್ಯಾಕ್: ಮೋದಿ ತನಿಖೆಗೊಳಪಡಲಿ, ಶಾ ರಾಜೀನಾಮೆ ನೀಡಲಿ- ಕಾಂಗ್ರೆಸ್ ಪಟ್ಟು
ಪೆಗಾಸಸ್ ಸಾಫ್ಟ್ವೇರ್ ಮಾರಾಟಗಾರ ಆಫ್ರಿಕನ್ ದೇಶವೊಂದರ ಜೊತೆಗೆ 2015 ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರತಿ ಈಟಿವಿ ಭಾರತ್ಗೆ ಲಭ್ಯವಾಗಿದೆ. ಇದರಲ್ಲಿ ಪೆಗಾಸಸ್ ಸಾಫ್ಟ್ವೇರ್ನ ಇನ್ಸ್ಟಾಲೇಶನ್ ಮತ್ತು ಅದರ ದೃಢತೆಯ ಬಗ್ಗೆ ತಿಳಿಸಲಾಗಿದೆ.