ಹೈದರಾಬಾದ್:ವಾಟ್ಸಪ್ ಸಂದೇಶಗಳನ್ನು ಒಮ್ಮೆಲೆ ಡಿಲೀಟ್ ಮಾಡಬಲ್ಲ ಬಗ್ (ದೋಷ) ವೊಂದರ ಸಮಸ್ಯೆ ಬಳಕೆದಾರರಿಗೆ ಎದುರಾಗಿದೆ ಎಂದು ತಾಂತ್ರಿಕ ಸುರಕ್ಷತಾ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಶೋಧಕರು, ಹ್ಯಾಕರ್ಗಳು ಹರಿಯಬಿಟ್ಟಿರುವ ಸಂದೇಶವೊಂದು ವಾಟ್ಸಪ್ ಗ್ರೂಪ್ ತಲುಪುತ್ತಿದ್ದಂತೆ, ಆ ಗ್ರೂಪ್ನಲ್ಲಿರುವ ಎಲ್ಲ ಸಂದೇಶಗಳು ಶಾಶ್ವತವಾಗಿ ಡಿಲೀಟ್ ಆಗುತ್ತವೆ. ಬಳಕೆದಾರರು ವಾಟ್ಸಪ್ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಹ್ಯಾಕರ್ಗಳ ಸಂದೇಶವು ವಾಟ್ಸಪ್ ಗ್ರೂಪ್ಗೆ ಬಂದ ತಕ್ಷಣ ಸಂದೇಶಗಳು ಡಿಲೀಟ್ ಆಗುವುದಲ್ಲದೆ, ಅಪ್ಲಿಕೇಷನ್ ಕೂಡ ಬಳಸಲು ಆಗದಂತೆ ಕ್ರ್ಯಾಷ್ ಆಗುತ್ತೆ. ಬಳಿಕ ಗ್ರೂಪ್ನ ಎಲ್ಲ ಸದಸ್ಯರೂ ಇರುವ ವಾಟ್ಸಪ್ ಡಿಲೀಟ್ ಮಾಡಿ, ಮತ್ತೊಮ್ಮೆ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಬಿಟ್ಟು ಬೇರೆ ಯಾವುದೇ ಪರಿಹಾರ ಮಾರ್ಗವಿಲ್ಲ. 2.19.58 ಆವೃತ್ತಿಯಲ್ಲಿ ಈ ಸಮಸ್ಯೆ ಬಗೆಹರಿಸಲಾಗಿದ್ದು,ಅಪ್ಡೇಟ್ ಮಾಡಿಕೊಳ್ಳಬೇಕಾಗಿದೆ.
ವಿಶ್ವದಾದ್ಯಂತ ಗ್ರಾಹಕರು, ಸರ್ಕಾರಿ ಸಂಸ್ಥೆಗಳು ಹಾಗೂ ವಾಣಿಜ್ಯ, ವ್ಯಾಪಾರ ನಡೆಸುವವರು ಸೇರಿದಂತೆ ಎಲ್ಲರಿಗೆ ವ್ಯಾಟ್ಸಪ್ ಪ್ರಮುಖವಾದ ಸಂಪರ್ಕ ಮಾಧ್ಯಮವಾಗಿ ಮಾರ್ಪಟ್ಟಿದೆ. ಈ ನಿಟ್ಟಿನಲ್ಲಿ ಬಗ್ಗಳನ್ನು ಗ್ರೂಪ್ ಚಾಟ್ಗಳಲ್ಲಿನ ಪ್ರಮುಖ ಮಾಹಿತಿಯನ್ನ ಡಿಲೀಟ್ ಮಾಡುವ ಅಸ್ತ್ರವನ್ನಾಗಿ ಹ್ಯಾಕರ್ಗಳು ಬಳಸುತ್ತಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
ವ್ಯಾಟ್ಸಪ್ನ ಒಂದು ಗ್ರೂಪ್ನಲ್ಲಿ 256 ಬಳಕೆದಾರರಿಗೆ ಅವಕಾಶವಿದೆ. ಕೃತ್ಯವೆಸಗುವ ಉದ್ದೇಶ ಹೊಂದಿರುವ ವ್ಯಕ್ತಿಯು ಒಂದು ಸಿದ್ದ ಮೆಸೇಜ್ನ್ನು ಗ್ರೂಪ್ಗೆ ಕಳಿಸಿದ ತಕ್ಷಣ, ಇಡೀ ಗ್ರೂಪ್ ಕಾರ್ಯ ಸ್ಥಗಿತಗೊಳ್ಳುತ್ತದೆ. ವ್ಯಾಟ್ಸಪ್ ವೆಬ್ನಲ್ಲಿ ಡಿಬಗ್ಗಿಂಗ್ ಟೂಲ್ ಬಳಸಿಕೊಂಡು ಎಡಿಟ್ ಮಾಡಿದ ಸಂದೇಶವೊಂದನ್ನು ಗ್ರೂಪ್ಗೆ ಹರಿಯಬಿಡುವ ಮೂಲಕ ಅಪ್ಲಿಕೇಷನ್ ಕ್ರ್ಯಾಷ್ ಆಗುವಂತೆ ಮಾಡಲಾಗುತ್ತದೆ. ಈ ಸಮಸ್ಯೆ ಎದುರಾಗಬಾರದೆಂದರೆ ವ್ಯಾಟ್ಸಪ್ ಬಳಕೆದಾರರು ಅಪ್ಡೇಟ್ ಮಾಡಿಕೊಳ್ಳುವುದು ಅಗತ್ಯವಾಗಿದೆ.