ನವದೆಹಲಿ: ಚೀನಾದಲ್ಲಿ ಸ್ಥಳೀಯ ಆವೃತ್ತಿಯ ಲಿಂಕ್ಡ್‌ಇನ್ ಆ್ಯಪ್ ಸ್ಥಗಿತಗೊಳಿಸುತ್ತಿರುವುದಾಗಿ ಮೈಕ್ರೋಸಾಫ್ಟ್ (ಎಂಎಸ್‌ಎಫ್‌ಟಿ) ಒಡೆತನದ ಕೆರಿಯರ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಸ್ಪಷ್ಟಪಡಿಸಿದೆ.
ಆಪರೇಟಿಂಗ್ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಸವಾಲುಗಳು ಹಾಗೂ ಚೀನಾದಲ್ಲಿ ಹೆಚ್ಚಿನ ಅನುಸರಣೆ ಅಗತ್ಯತೆಗಳ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಲಿಂಕ್ಡ್‌ಇನ್‌ನಲ್ಲಿ ಇಂಜಿನಿಯರಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷ ಮೊಹಕ್ ಶ್ರಾಫ್ ತಮ್ಮ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ.
ಕಂಪನಿಯು ಈ ವರ್ಷದ ಕೊನೆಯಲ್ಲಿ ಇನ್‌ಜಾಬ್ಸ್(InJobs) ಎಂಬ ಹೊಸ ಆ್ಯಪ್ ಅನ್ನು ಹೊರತರುತ್ತದೆ. ಇದು ಚೀನಾಗೆ ಮಾತ್ರ ಪೋರ್ಟಲ್ ಆಗಿದ್ದು, ಸಾಮಾಜಿಕ ಫೀಡ್, ಪೋಸ್ಟ್‌ಗಳು ಅಥವಾ ಲೇಖನಗಳನ್ನು ಹಂಚಿಕೊಳ್ಳುವ ಸಾಮರ್ಥ್ಯವನ್ನು ಒಳಗೊಂಡಿರುವುದಿಲ್ಲ. ಆದರೆ, ಉದ್ಯೋಗಗಳಿಗೆ ಪಟ್ಟಿ ಮಾಡಲು ಮತ್ತು ಅರ್ಜಿ ಸಲ್ಲಿಸಲು ಕೇವಲ ಪೋರ್ಟಲ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ಚೀನಾದ ಜನರು ಉದ್ಯೋಗಗಳು ಮತ್ತು ಆರ್ಥಿಕ ಅವಕಾಶಗಳನ್ನು ಕಂಡುಕೊಳ್ಳಲು ಸಹಾಯ ಮಾಡಿದ್ದೇವೆ. ಇದರಲ್ಲಿ ನಾವು ಯಶಸ್ಸನ್ನು ಕಂಡುಕೊಂಡಿದ್ದರೂ, ಹಂಚಿಕೆ ಮತ್ತು ಮಾಹಿತಿಯ ಹೆಚ್ಚಿನ ಸಾಮಾಜಿಕ ಅಂಶಗಳಲ್ಲಿ ಅದೇ ಮಟ್ಟದ ಯಶಸ್ಸನ್ನು ಇಲ್ಲಿ ನಾವು ಕಂಡುಕೊಂಡಿಲ್ಲ. ಚೀನಾದಲ್ಲಿ ಕಾರ್ಯನಿರ್ವಹಿಸುವುದು ಯಾವಾಗಲೂ ಖಾಸಗಿ ಕಂಪನಿಗಳಿಗೆ ಸವಾಲಾಗಿರುತ್ತದೆ. ಆದರೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದಲ್ಲಿ ಕಳೆದ ವರ್ಷದಲ್ಲಿ ನಿಮಯಗಳು ಇನ್ನಷ್ಟು ಬಿಗಿಯಾಗಿವೆ ಎಂದು ಶ್ರಾಫ್ ತಿಳಿಸಿದ್ದಾರೆ.
2014 ರಿಂದ ಚೀನಾದಲ್ಲಿ ಲಿಂಕ್ಡ್‌ಇನ್ ಸೌಲಭ್ಯವಿದ್ದು, ದೇಶದಲ್ಲಿ 45 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಫೇಸ್‌ಬುಕ್ ಮತ್ತು ಟ್ವಿಟರ್ ಸೇರಿದಂತೆ ಹಲವು ಪಾಶ್ಚಿಮಾತ್ಯ ಸಾಮಾಜಿಕ ಜಾಲತಾಣಗಳನ್ನು ಚೀನಾ ಸರ್ಕಾರ ನಿರ್ಬಂಧಿಸಿದೆ.