ತಿರುಪತಿ(ಆಂಧ್ರ ಪ್ರದೇಶ): ಲಾಕ್ಡೌನ್ ಏಪ್ರಿಲ್ 14ರವರೆಗೂ ಮುಂದುವರೆದ ಕಾರಣ ತಿರುಪತಿಯ ತಿರುಮಲ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ 300 ರೂಪಾಯಿ ಕೊಟ್ಟು ಪ್ರತ್ಯೇಕ ಪ್ರವೇಶಕ್ಕೆ ಟಿಕೆಟ್ ಬುಕ್ ಮಾಡಿರುವ ಭಕ್ತರು ತಮ್ಮ ಪ್ರವೇಶವನ್ನು ಮೂಂದೂಡಲು, ಇಲ್ಲವಾದಲ್ಲಿ ಟಿಕೆಟ್ ರದ್ದು ಮಾಡಿಕೊಂಡರೆ ಹಣ ವಾಪಸ್ ನೀಡುವುದಕ್ಕೆ ಟಿಟಿಡಿ ಏರ್ಪಾಟುಗಳನ್ನು ಮಾಡಿಕೊಂಡಿದೆ.
ಏಪ್ರಿಲ್ 2ರ ಶ್ರೀರಾಮನವಮಿ ಸಂದರ್ಭದಲ್ಲಿ ನಡೆಯಬೇಕಿದ್ದ ಹನುಮಂತ ವಾಹನ ಸೇವೆಯನ್ನೂ ರದ್ದು ಮಾಡಲಾಗಿದೆ. ಕೆಲವೊಂದು ಉತ್ಸವಗಳನ್ನು ಕೆಲವೇ ಮಂದಿಯ ಸಮಕ್ಷಮದಲ್ಲಿ ಆಚರಿಸಬೇಕೆಂದು ನಿರ್ಧಾರ ಮಾಡಲಾಗಿದೆ. ಏಪ್ರಿಲ್ 5ರಿಂದ 7ರವರೆಗೆ ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ವಸಂತೋತ್ಸವವನ್ನು ಕೂಡಾ ಯಾವುದೇ ವೈಭವವಿಲ್ಲದೇ ಆಚರಿಸಲಾಗುತ್ತದೆ.