ಹೈದರಾಬಾದ್: ಪ್ರೀತಿಯ ಸ್ನೇಹಿತೆ ತನ್ನಿಂದ ದೂರವಾಗಿದ್ದಾಳೆಂಬ ಕೊರಗಿನಿಂದ ಯುವತಿವೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.
ಸಿರಿಸಿಲ್ಲ ಗ್ರಾಮದ ನಮ್ರತಾ ಮತ್ತು ಹೈದರಾಬಾದ್ನ ಫಿಲ್ಮ್ನಗರ್ನ ಶ್ರೀದೇವಿ ಇಬ್ಬರು ಸ್ನೇಹಿತರು. ಇವರು ಹಿಮಾಯತ್ನಗರದ ರುಷಿ ಕಾಲೇಜ್ನಲ್ಲಿ ದೂರಶಿಕ್ಷಣ ಮೂಲಕ ಪದವಿ ವ್ಯಾಸಂಗ ಮಾಡುತ್ತಿದ್ದರು. ಶ್ರೀದೇವಿ ಹೈದರಾಬಾದ್ ಮೂಲದವಳಾಗಿದ್ದರಿಂದ ಉದ್ಯೋಗಸ್ಥೆಯಾಗಿದ್ದಳು. ಆದ್ರೆ ಮನೆಯಿಂದ ದೂರವಿರುತ್ತಿದ್ದಳು. ನಮ್ರತಾ ಮತ್ತು ಶ್ರೀದೇವಿ ಒಂದೇ ಹಾಸ್ಟೆಲ್ನಲ್ಲಿ ಇದ್ದುದರಿಂದ ಇಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಐದು ತಿಂಗಳ ಬಳಿಕ ನಮ್ರತಾ ಹಾಸ್ಟೆಲ್ ಬಿಟ್ಟು ಮನೆಗೆ ಹಿಂದಿರುಗಿದ್ದಳು.
ಶನಿವಾರ ಸೈಂಟ್ ಪೌಲ್ಸ್ ಶಾಲೆಗೆ ಪರೀಕ್ಷೆ ಬರೆಯಲು ನಮ್ರತಾ ಬಂದಿದ್ದಳು. ಈ ವಿಷಯ ತಿಳಿದ ಶ್ರೀದೇವಿ ನೇರ ಆ ಶಾಲೆಗೆ ತೆರಳಿದ್ದು, ತನ್ನನ್ನು ಬಿಟ್ಟು ಹೋಗ್ತೀಯಾ ಅಂತಾ ನಮ್ರತಾ ಜೊತೆ ಶ್ರೀದೇವಿ ಜಗಳವಾಡಿದ್ದಳಂತೆ. ಈ ಕುರಿತು ನಮ್ರತಾ ನಾರಾಯಣಗುಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರಿಂದ ಪೊಲೀಸರು ಶ್ರೀದೇವಿಗೆ ಬುದ್ಧಿಮಾತು ಹೇಳಿ ಮನೆಗೆ ಕಳುಹಿಸಿದ್ದರು. ಬಳಿಕ ನಮ್ರತಾ ತನ್ನ ಗ್ರಾಮಕ್ಕೆ ಹಿಂದಿರುಗಿದ್ದಳು.
ಶ್ರೀದೇವಿ ತನ್ನ ಸ್ನೇಹಿತರ ಜೊತೆ ಸೇರಿ ಪಾರ್ಕ್ಗೆ ಹೋಗಿದ್ದಳು. ಅಲ್ಲಿ ಸ್ನೇಹಿತರ ಕಣ್ತಪ್ಪಿಸಿ ರಾಸಾಯನಿಕ ದ್ರವವನ್ನು ಸೇವಿಸಿ ಮೂರ್ಛೆ ಹೋಗಿದ್ದಳು. ಕೂಡಲೇ ಆಕೆಯನ್ನು ಸ್ನೇಹಿತೆಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಪೋಷಕರು ಆಕೆಯನ್ನು ಜೂಬ್ಲಿ ಹಿಲ್ಸ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಶ್ರೀದೇವಿ ಮೃತಪಟ್ಟಿದ್ದಾಳೆ. ಈ ಆತ್ಮಹತ್ಯೆಗೆ ಇವರ ಮಧ್ಯೆ ಇದ್ದ ಪ್ರೀತಿಯೇ ಕಾರಣವಾಯ್ತೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ.