ಬಲರಾಂಪುರ (ಉತ್ತರ ಪ್ರದೇಶ):ನಮ್ಮ ಮಗಳ ಸಾವಿಗೆ ನ್ಯಾಯ ಸಿಗದಿದ್ದರೆ ನಮಗೆ ನಾವೇ ಬೆಂಕಿ ಹಚ್ಚಿಕೊಂಡು ಸಾಯುತ್ತೇವೆ ಎಂದು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಯುವತಿಯ ಪೋಷಕರು ಉತ್ತರ ಪ್ರದೇಶ ಪೊಲೀಸರ ತನಿಖೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ನ್ಯಾಯ ಸಿಗದಿದ್ರೆ ಬೆಂಕಿ ಹಚ್ಚಿಕೊಂಡು ಸಾಯ್ತೇವೆ: ಬಲರಾಂಪುರ ಗ್ಯಾಂಗ್ ರೇಪ್ ಸಂತ್ರಸ್ತೆ ಪೋಷಕರ ಎಚ್ಚರಿಕೆ - ಬಲರಾಂಪುರ
ಉಳಿದ ಆರೋಪಿಗಳನ್ನು ಬಂಧಿಸಲು ಯುಪಿ ಪೊಲೀಸರು ಹಿಂದೇಟು ಹಾಕುತ್ತಿದ್ದು, ಕೇಸ್ ಕ್ಲೋಸ್ ಮಾಡಲು ಆರೋಪಿಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿರುವ ಬಲರಾಂಪುರ ಅತ್ಯಾಚಾರ ಸಂತ್ರಸ್ತೆ ಕುಟುಂಬಸ್ಥರು, ಬೆಂಕಿ ಹಚ್ಚಿಕೊಂಡು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಅರೆಸ್ಟ್ ಆಗಿರುವ ಆರೋಪಿಗಳಿಗೆ ಪೊಲೀಸರು ಬೆಂಬಲ ನೀಡುತ್ತಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ. ಕೇಸ್ ಕ್ಲೋಸ್ ಮಾಡಲು ಆರೋಪಿಗಳಿಂದ ಪೊಲೀಸರು ಹಣ ಪಡೆದಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದಾರೆ. ಶೀಘ್ರದಲ್ಲೇ ನಮ್ಮ ಮಗಳ ಸಾವಿಗೆ ನ್ಯಾಯ ಸಿಗದಿದ್ದರೆ ಆರೋಪಿಗಳ ಮನೆಯನ್ನು ಸುಟ್ಟು, ನಮ್ಮ ಕುಟುಂಬದ ಸದಸ್ಯರೆಲ್ಲರೂ ಬೆಂಕಿ ಹಚ್ಚಿಕೊಂಡು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಯುಪಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ಸೆ. 29ರಂದು ಉತ್ತರ ಪ್ರದೇಶದ ಬಲರಾಂಪುರದ ಗೈಸಾರಿ ಪ್ರದೇಶದಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವತಿಯನ್ನು ಅಪಹರಿಸಿದ ಕಾಮುಕರು, ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಅಲ್ಲದೆ ಯುವತಿ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದರು. ಚಿಕಿತ್ಸೆ ಫಲಿಸದೆ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.