ಕೊಪ್ಪಳ: ಪತ್ನಿ ಹಾಗೂ ಆಕೆಯ ತವರು ಮನೆಯವರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿವೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಸದಾಶಿವ ನಗರದಲ್ಲಿ ನಡೆದಿದೆ.
ದೊಡ್ಡಬಸವ ಅಗಸಿಮುಂದಿನ (34) ಎಂಬ ವ್ಯಕ್ತಿ ಮನೆಯಲ್ಲಿ ನೇಣಿಗೆ ಶರಣಾಗಿರುವ ವ್ಯಕ್ತಿ. ಆತ್ಮಹತ್ಯೆಗೂ ಮುನ್ನ ದೊಡ್ಡಬಸವ ಡೆತ್ ನೋಟ್ ಬರೆದಿಟ್ಟಿದ್ದು, ಪತ್ನಿ ಶಿಲ್ಪಾ ಹಾಗೂ ಆಕೆಯ ತವರು ಮನೆಯವರು ಹಾಗೂ ಪೊಲೀಸ್ ಅಧಿಕಾರಿವೋರ್ವರ ಹೆಸರನ್ನು ಡೆತ್ ನೋಟ್ನಲ್ಲಿ ಬರೆದಿದ್ದಾನೆ ಎನ್ನಲಾಗ್ತಿದೆ.
ಪತ್ನಿ ಕಿರುಕುಳದಿಂದ ಪತಿ ಆತ್ಮಹತ್ಯೆ ಮೃತನ ಮನೆಯಲ್ಲಿ ಸುಮಾರು ಮೂರು ಪುಟಗಳ ಡೆತ್ನೋಟ್ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ದೊಡ್ಡಬಸವ ಅವರ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. ಹಿರಿಯರನ್ನು ಕರೆಸಿ ರಾಜಿ ಪಂಚಾಯಿತಿಯನ್ನು ಸಹ ಮಾಡಲಾಗಿತ್ತು. ಆದ್ರೆ ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಗಲಾಟೆ ನಡೆದಿತ್ತು. ಪತಿ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಪತ್ನಿ ಶಿಲ್ಪಾ ಹಾಗೂ ಆಕೆಯ ತವರು ಮನೆಯವರು ಸುಳ್ಳು ಕೇಸು ದಾಖಲಿಸಿದ್ದಾರಂತೆ. ಇದರಿಂದ ಮನನೊಂದ ದೊಡ್ಡಬಸವ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೊಡ್ಡ ಬಸವನ ಸಾವಿಗೆ ಆತನ ಪತ್ನಿ ಹಾಗೂ ಆಕೆಯ ತವರು ಮನೆಯವರು ಮತ್ತು ಪೊಲೀಸ್ ಅಧಿಕಾರಿಯ ಕಿರುಕುಳವೇ ಕಾರಣವೆಂದು ದೊಡ್ಡ ಬಸವನ ಕುಟುಂಬಸ್ಥರು ಹಾಗೂ ಆತನ ಸ್ನೇಹಿತರು ಆರೋಪಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.