ಕರ್ನಾಟಕ

karnataka

ETV Bharat / jagte-raho

ಅಪಘಾತದಲ್ಲಿ ಗಾಯಗೊಂಡಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಪರ ವಕೀಲ​ ನಿಧನ - ಉತ್ತರ ಪ್ರದೇಶ

ಅಪಘಾತಕ್ಕೀಡಾಗಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಪರ ವಕೀಲ ಮಹೇಂದ್ರ ಸಿಂಗ್ ಇಂದು ಕೊನೆಯುಸಿರೆಳೆದಿದ್ದಾರೆ.

Mahendra Singh
ಮಹೇಂದ್ರ ಸಿಂಗ್​

By

Published : Nov 30, 2020, 5:07 PM IST

ಉತ್ತರ ಪ್ರದೇಶ: ದೇಶವನ್ನೇ ಬೆಚ್ಚಿಬೀಳಿಸಿದ್ದ 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಪರ ವಕೀಲ ಮಹೇಂದ್ರ ಸಿಂಗ್ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

2019ರ ಜುಲೈನಲ್ಲಿ ಉತ್ತರ ಪ್ರದೇಶದ ರಾಯ್​​ಬರೇಲಿ ಬಳಿ ರೇಪ್​ ಸಂತ್ರಸ್ತೆ ಹಾಗೂ ಮಹೇಂದ್ರ ಸಿಂಗ್ ಇದ್ದ ಕಾರು ಅಪಘಾತಕ್ಕೀಡಾಗಿತ್ತು. ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಇದು ಪೂರ್ವನಿಯೋಜಿತ ಕೃತ್ಯ ಎಂಬುದು ಬಯಲಾಗಿತ್ತು. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡ ಸಂತ್ರಸ್ತೆ ಮತ್ತು ಸಿಂಗ್​ರನ್ನು ದೆಹಲಿಯ ಏಮ್ಸ್​ಗೆ ದಾಖಲಿಸಲಾಗಿತ್ತು.

ಎರಡು ತಿಂಗಳ ಬಳಿಕ ಸಂತ್ರಸ್ತೆ ಡಿಸ್ಚಾರ್ಚ್​ ಆಗಿದ್ದಳು. ಸಿಂಗ್​ರನ್ನು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ತಿಳಿಸಿ ಮನೆಗೆ ಕಳುಹಿಸಲಾಗಿತ್ತು. ಬಳಿಕ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಹೇಂದ್ರ ಸಿಂಗ್​ರ ಸ್ಥಿತಿ ನಿನ್ನೆ ರಾತ್ರಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಅಸುನೀಗಿದ್ದಾರೆ.

ಉನ್ನಾವೋ ಪ್ರಕರಣ:

  • 2017ರಲ್ಲಿ ಉತ್ತರ ಪ್ರದೇಶದ ಉನ್ನಾವೋ ಪ್ರದೇಶದ 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿತ್ತು. ಕೃತ್ಯದ ಆರೋಪ ಅಂದಿನ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಮೇಲಿತ್ತು.
  • 2018ರಲ್ಲಿ ಸಂತ್ರಸ್ತೆಯ ತಂದೆಯ ಮೇಲೆ ಸುಳ್ಳು ಆರೋಪಹೊರಿಸಿ ಬಂಧಿಸಲಾಗಿತ್ತು. ಪೊಲೀಸ್​ ಕಸ್ಟಡಿಯಲ್ಲಿ ಬಾಲಕಿಯ ತಂದೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಬಳಿಕ ಇದು ಕೊಲೆ ಎಂಬುದು ತಿಳಿದು ಬಂದಿತು.
  • ಬಳಿಕ ಈ ಪ್ರಕರಣ ರಾಷ್ಟ್ರೀಯ ಸುದ್ದಿ ವಾಹಿನಿಗಳ ಮೂಲಕ ದೇಶಾದ್ಯಂತ ಹಬ್ಬಿ ಜನರ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ ಅಲಹಾಬಾದ್​​ ಹೈಕೋರ್ಟ್​ ಆದೇಶ ನೀಡಿತ್ತು. ಕೇಸ್​ನ ಹೊಣೆ ಹೊತ್ತ ಸಿಬಿಐ ಕುಲದೀಪ್ ಸೆಂಗರ್ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ಚುರುಕುಗೊಳಿಸಿತು.
  • 2019ರ ಜುಲೈನಲ್ಲಿ ಸಂತ್ರಸ್ತೆ ಹಾಗೂ ಮಹೇಂದ್ರ ಸಿಂಗ್ ಇದ್ದ ಕಾರನ್ನು ಅಪಘಾತಕ್ಕೊಳಪಡಿಸಲಾಗಿತ್ತು. ಘಟನೆಯಲ್ಲಿ ಸಂತ್ರಸ್ತೆಯ ಇಬ್ಬರು ಸಂಬಂಧಿಕರು ಮೃತಪಟ್ಟಿದ್ದು, ಸಂತ್ರಸ್ತೆ ಹಾಗೂ ಸಿಂಗ್​ ಗಾಯಗೊಂಡಿದ್ದರು. ಆಕೆ ಗುಣಮುಖಳಾಗಿ ಹೊರಬಂದ ಬಳಿಕ ನಾಲ್ವರು ದುಷ್ಕರ್ಮಿಗಳು ಆಕೆಗೆ ಬೆಂಕಿ ಹಚ್ಚಿದ್ದರು. ಶೇ.90ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆ 2019ರ ಡಿ.6ರಂದು ಮೃತಪಟ್ಟಿದ್ದಳು.
  • 2019ರ ಡಿ.16 ರಂದು ಶಾಸಕ ಸೆಂಗರ್ ದೋಷಿ ಎಂಬುದು ಸಾಬೀತಾಯಿತು. ಇವರಿಗೆ ಜೀವಾವಧಿ ಶಿಕ್ಷೆಯನ್ನೂ ಪ್ರಕಟಿಸಲಾಯಿತು.
  • 2020ರ ಮಾರ್ಚ್​ನಲ್ಲಿ ಸಂತ್ರಸ್ತೆಯ ತಂದೆ ಕೊಲೆ ಪ್ರಕರಣದಲ್ಲಿ ಕುಲದೀಪ್ ಸೆಂಗರ್, ಅವರ ಸಹೋದರು ಸೇರಿದಂತೆ ಏಳು ಮಂದಿಗೆ ದೆಹಲಿ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿತು.

ABOUT THE AUTHOR

...view details