ಯಾದಗಿರಿ: ಚಿನ್ನದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೇ ಮಾಲೀಕನ ಮಗನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ.
ಹುಣಸಗಿ ಪಟ್ಟಣದ ಧನಲಕ್ಷ್ಮಿ ಜುವೆಲ್ಲರ್ಸ್ನ ಮಾಲೀಕರಾದ ಜಗದೀಶ್ ಶಿರವಿ ಎಂಬುವರ ಪುತ್ರ ನರೇಂದ್ರ (21) ಎಂಬಾತನನ್ನು ಕೊಲೆ ಮಾಡಲಾಗಿತ್ತು. ನರೇಂದ್ರ ಸುರಪುರ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ. ರಾಜಸ್ಥಾನ ಮೂಲದ ಜಗದೀಶ್ ಶಿರವಿ ಕಳೆದ ಹಲವು ವರ್ಷಗಳಿಂದ ಪಟ್ಟಣದಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು, ಕೆಲಸಕ್ಕಾಗಿ ಅದೇ ಊರಿನ ಕಿಶೋರ್ ಎಂಬ ಯುವಕನನ್ನು ಇಟ್ಟುಕೊಂಡಿದ್ದ.
ಕಳೆದ ಐದು ವರ್ಷಗಳಿಂದ ಕಿಶೋರ್ ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಕಿಶೋರ್ಗೆ ಬಂಗಾರದ ಚೈನ್ ಕಟ್ ಆಗಿದೆ ಬೇರೆ ಅಂಗಡಿಗೆ ಹೋಗಿ ಸರಿ ಮಾಡಿಸಿಕೊಂಡು ಬಾ ಅಂತ ಜಗದೀಶ್ ಕಳುಹಿಸಿದ್ದಾನೆ. ಆದರೆ, ಕಿಶೋರ್ ಬೇರೆ ಅಂಗಡಿಗೆ ಹೋಗುವ ಬದಲು ನೇರವಾಗಿ ಜಗದೀಶ್ ಮನೆಗೆ ಹೋಗಿದ್ದಾನೆ. ಈ ವೇಳೆ, ಮನೆಯಲ್ಲಿದ್ದ ಬಂಗಾರವನ್ನು ಕದ್ದು ಪರಾರಿಯಾಗಲು ಯತ್ನಿಸಿದ್ದು, ಇದನ್ನು ನರೇಂದ್ರ ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಕತ್ತಿಗೆ ಚುಚ್ಚಿ ಬರ್ಬವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.