ಬೆಂಗಳೂರು: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ರೌಡಿಶೀಟರ್ಗಳನ್ನು ಬಂಧಿಸುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಗ್ಗಿ ಆಲಿಯಾಸ್ ಟ್ಯಾಟೂ ಜಗ್ಗಿ, ಅಜಯ್ ಕುಮಾರ್ ಹಾಗೂ ವಿಶ್ವನಾಥ್ ಬಂಧಿತ ಆರೋಪಿಗಳು. ಬಂಧಿತರು ಬಾಗಲಗುಂಟೆ ಪೊಲೀಸ್ ಠಾಣೆಯ ರೌಡಿಶೀಟರ್ಗಳಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಇವರನ್ನು ಬಂಧಿಸಿ, ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೆಲ ದಿನಗಳ ಹಿಂದೆ ಬಾಗಲಗುಂಟೆ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಚಾಕು ತೋರಿಸಿದ್ದರು. ಈ ವೇಳೆ ಆ ವ್ಯಕ್ತಿ ಹಣ ನೀಡಲು ನಿರಾಕರಿಸಿದಾಗ ವ್ಯಕ್ತಿಯ ಬೆರಳುಗಳನ್ನೇ ಕತ್ತರಿಸಿ ಹಾಕಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಬಾಗಲಗುಂಟೆ ಇನ್ಸ್ಪೆಕ್ಟರ್ ಶಿವಸ್ವಾಮಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಇನ್ನು ಬಂಧನದ ವೇಳೆ ಆರೋಪಿ ಟ್ಯಾಟೂ ಜಗ್ಗಿಯು, ಪಿಎಸ್ಐ ಕುಮಾರ್ ಹಾಗೂ ಪಿಎಸ್ಐ ಶ್ರೀಕಾಂತ್ ಎಂಬುವರಿಗೆ ನೀರಿನ ರೂಪದ ದ್ರವ ತೋರಿಸಿ ಆ್ಯಸಿಡ್ ಎಂದು ಎರಚಿದ್ದಾನೆ. ಅಲ್ಲದೆ, ಬಂಧನ ಬೀತಿಯಿಂದ ತಪ್ಪಿಸಿಕೊಳ್ಳಲು ಇದೇ ನೀರಿನ ರೂಪದ ದ್ರವವನ್ನ ಕುಡಿದಿದ್ದಾನೆ ಎನ್ನಲಾಗುತ್ತಿದೆ. ಕೂಡಲೇ ಆತನನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಚೇತರಿಸಿಕೊಂಡಿದ್ದು ಟ್ಯಾಟೂ ಜಗ್ಗಿ ಸೇರಿದಂತೆ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.