ಕರ್ನಾಟಕ

karnataka

ETV Bharat / jagte-raho

ಅಧಿಕಾರಿಗಳ ಸೋಗಿನಲ್ಲಿ ಬಂದು ಮನೆಯನ್ನೇ ದೋಚಿದ ಖದೀಮರು.. - ಅಧಿಕಾರಿಗಳ ಸೋಗಿನಲ್ಲಿ ಬಂದ ಕಳ್ಳರು

ದಾವಣಗೆರೆ ನಗರದಲ್ಲಿನ ಮನೆಯೊಂದಕ್ಕೆ ನಾವು ಮಹಾನಗರ ಪಾಲಿಕೆಯ ಅಧಿಕಾರಿಗಳು ಎಂದು ಹೇಳಿಕೊಂಡು ಬಂದ ಖದೀಮರು, ಮನೆಯಲ್ಲಿದ್ದ ನಗದು, ಚಿನ್ನಾಭರಣಗಳೆಲ್ಲವನ್ನೂ ದೋಚಿ ಪರಾರಿಯಾಗಿದ್ದಾರೆ.

ದರೋಡೆಯಾದ ಮನೆ

By

Published : Aug 16, 2019, 8:36 PM IST

Updated : Aug 16, 2019, 9:00 PM IST

ದಾವಣಗೆರೆ:ರಾತ್ರಿ ಹೊತ್ತಲ್ಲಿ ಮನೆಗಳಿಗೆ ನುಗ್ಗಿ, ಮನೆಯವರನ್ನು ಹೆದರಿಸಿ ಬೆದರಿಸಿ ದರೋಡೆ ಮಾಡೋ ಬಗ್ಗೆ ನೀವೆಲ್ಲಾ ಕೇಳಿರ್ತೀರಿ. ಆದರೆ, ದಾವಣಗೆರೆಯಲ್ಲಿ ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರು ಬಂಗಾರ, ಬೆಳ್ಳಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.


ದಾವಣಗೆರೆಯ ಶಿವಕುಮಾರಸ್ವಾಮಿ ನಗರದ ದುರ್ಗಾಂಬಿಕಾ ದೇವಸ್ಥಾನದ ಬಳಿ ಇರುವ ಸುರೇಶ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಜಮೀನುದಾರರಾದ ಸುರೇಶ್ ವರಮಹಾಲಕ್ಷ್ಮಿ ಹಬ್ಬಕ್ಕೆ ಎಂದು ಮನೆಯವರ ಬಳಿ ಇದ್ದ ಬಂಗಾರವನ್ನು ವರಮಹಾಲಕ್ಷ್ಮಿಗೆ ಸಿಂಗರಿಸಿ, ಭರ್ಜರಿಯಾಗೇ ಹಬ್ಬ ಆಚರಿಸಿದ್ದರು. ಜೊತೆಗೆ ಅಂದು ಅವರ ಹೊಸ ಮಳಿಗೆಗಳ ಗೃಹ ಪ್ರವೇಶ ಮುಗಿಸಿ ಅರ್ಧ ಕೆಜಿ ಬಂಗಾರ ಹಾಗೂ ಅರ್ಧ ಕೆಜಿ ಬೆಳ್ಳಿಯನ್ನು ಮನೆಯಲ್ಲಿದ್ದ ಬೀರುವಿನಲ್ಲಿ ಇಟ್ಟಿದ್ದರು. ಆದರೆ, ಖದೀಮರು ಬಂಗಾರ ಬೆಳ್ಳಿಯ ಜೊತೆಗೆ ನಗದನ್ನೂ ಸೇರಿ ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿದ್ದಾರೆ.

ದರೋಡೆಯಾದ ಮನೆ


ಅಧಿಕಾರಿಗಳ ಸೋಗಿನಲ್ಲಿ ಬಂದ ಕಳ್ಳರು, ನಾವು ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ಎಂದು ಹೇಳಿಕೊಂಡು ಮೂವರು ಅಪರಿಚಿತ ಯುವಕರು ಸುರೇಶ್ ಅವರ ಮನೆಗೆ ಬಂದಿದ್ದರು. ಮನೆಯಲ್ಲಿ ಸುರೇಶ್ ಅವರ ಪತ್ನಿ ಸುಧಾ ಮತ್ತು ತಾಯಿ ರುದ್ರಮ್ಮ ಸಹ ಇದ್ದರು. ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಬಂದ ಮೂವರು, ನಾವು ಪಾಲಿಕೆ ಅಧಿಕಾರಿಗಳು, ನಿಮ್ಮ ಮನೆಯ ಯುಜಿಡಿ ಸಂಪರ್ಕ ತೋರಿಸಿ ಅಂತಾ ಸುರೇಶ್ ಅವರನ್ನ ಕೇಳಿದ್ದಾರೆ.

ಆಗ ಮನೆಯಲ್ಲಿದ್ದ ಬಾತ್ ರೂಂಗಳ ಸಂಪರ್ಕವನ್ನ ಅವರಿಗೆ ತೋರಿಸಿ, ನಂತರ ಮೊದಲ ಮಹಡಿಯಲ್ಲಿಯೂ ತೋರಿಸಿ ಎಂದಾಗ, ಸುರೇಶ್ ಮತ್ತು ಪತ್ನಿ ಮೊದಲ ಮಹಡಿಗೆ ಯುಜಿಡಿ ತೋರಿಸಲು ತೆರಳಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನೊಬ್ಬ ಮನೆ ಒಳಗೆ ಪ್ರವೇಶ ಮಾಡಿ, ಮನೆಯಲ್ಲಿದ್ದ ಅಜ್ಜಿಗೆ ಅಧಿಕಾರಿ ಎಂದು ಹೇಳಿ ರೂಂ ಪ್ರವೇಶ ಮಾಡಿದ್ದಾನೆ. ಕೋಣೆಯೊಳಗೆ ಹೋಗಿ ಬೀರುವಿನಲ್ಲಿದ್ದ ಸುಮಾರು ಅರ್ಧ ಕೆಜಿ ಬಂಗಾರ, ಅರ್ಧ ಕೆಜಿ ಬೆಳ್ಳಿ ಹಾಗೂ 30 ಸಾವಿರ ನಗದನ್ನೂ ಕದ್ದು ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದವರು ಮನೆಯ ಬಳಿ ಜಮಾಯಿಸಿದ್ದಾರೆ. ಸ್ಥಳಕ್ಕೆ ದಾವಣಗೆರೆ ಎಸ್ ಪಿ ಹನುಮಂತರಾಯ ಹಾಗೂ ಹಿರಿಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಮನೆ ಮಾಲೀಕ ಸುರೇಶ್ ಮನೆ ಮುಂಭಾಗ ಕುಳಿತು ಕಣ್ಣೀರು ಹಾಕುತ್ತಿದ್ದಾರೆ. ಹಾಡುಹಗಲೇ ನಡೆದಿರುವ ಈ ಘಟನೆಗೆ ಇಡೀ ದಾವಣಗೆರೆಯೇ ಬೆಚ್ಚಿ ಬಿದ್ದಿದೆ. ಅಧಿಕಾರಿಗಳ ಸೋಗಿನಲ್ಲೇ ಬಂದು ನಗರದ ಹೃದಯಭಾಗದಲ್ಲೇ ಈ ರೀತಿ ಕಳ್ಳತನವಾಗಿರೋದು ಜನರಲ್ಲಿ ಆತಂಕ ಮೂಡಿಸಿದೆ.

Last Updated : Aug 16, 2019, 9:00 PM IST

ABOUT THE AUTHOR

...view details