ಕರೌಲಿ (ರಾಜಸ್ಥಾನ) :ಭೂವಿವಾದ ಹಿನ್ನೆಲೆ ದೇವಾಲಯದ ಅರ್ಚಕನನ್ನು ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯ ಬುಕ್ನಾ ಗ್ರಾಮದಲ್ಲಿ ನಡೆದಿದೆ.
ಗುರುವಾರ ರಾತ್ರಿ ಘಟನೆ ನಡೆದಿದ್ದು, 24 ಗಂಟೆಗಳ ಒಳಗೇ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಕರೌಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಅದೇ ಗ್ರಾಮದ ಕೈಲಾಶ್ ಮೀನಾ ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ:
ಅರ್ಚಕ ಗ್ರಾಮದಲ್ಲಿರುವ ದೇವಸ್ಥಾನವೊಂದರ ಆವರಣದಲ್ಲಿದ್ದ ಕೃಷಿ ಜಮೀನನ್ನು ನೋಡಿಕೊಳ್ಳುತ್ತಿದ್ದರು. ಈ ಜಮೀನನ್ನು ಕೈಲಾಶ್ ಮೀನಾ ಪಡೆದುಕೊಳ್ಳಲು ಯತ್ನಿಸುತ್ತಿದ್ದನು. ಗುರುವಾರ ಜಮೀನಿನ ಸ್ಥಳದಲ್ಲಿ ಟೆಂಟ್ ನಿರ್ಮಿಸಲು ಕೈಲಾಶ್ ಹಾಗೂ ಇತರರು ಮುಂದಾಗಿದ್ದಾರೆ. ಇದನ್ನು ತಡೆಯಲು ಬಂದ ಅರ್ಚಕನನ್ನು ಟೆಂಟ್ಗೆ ಬೆಂಕಿ ಹಚ್ಚಿ ಅದರಲ್ಲಿ ದೂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅರ್ಚಕ ಸ್ಥಳದಲ್ಲೇ ಮೃತಪಟ್ಟಿದ್ದರು.
ಪ್ರಕರಣದ ಬೆನ್ನತ್ತಿದ ನಾವು ವಿಶೇಷ ತಂಡಗಳನ್ನು ರಚಿಸಿ ಪ್ರಮುಖ ಆರೋಪಿ ಕೈಲಾಶ್ ಮೀನಾನನ್ನು ಅರೆಸ್ಟ್ ಮಾಡಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದೇವೆ ಎಂದು ಕರೌಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಚಂದ್ ತಿಳಿಸಿದ್ದಾರೆ.