ಬೆಂಗಳೂರು:ಮನೆ ಮುಂದೆ ಕಾರು ನಿಲ್ಲಿಸುವವರು ಎಚ್ಚರದಿಂದಿರಿ! ಏಕೆಂದರೆ ಬೆಂಗಳೂರಲ್ಲಿ ಯುಟ್ಯೂಬ್ ನೋಡಿ ಕಾರು ಕಳ್ಳರ ಗ್ಯಾಂಗ್ ಕಾಲಿಟ್ಟಿದೆ. ಈ ಖದೀಮರು ಕೇವಲ 5 ನಿಮಿಷದಲ್ಲಿ ಕಾರು ಕದ್ದು ಪರಾರಿಯಾಗುತ್ತಾರೆ.
ಯುಟ್ಯೂಬ್ನಲ್ಲಿ ಕಾರು ಲಾಕ್ ತೆಗೆಯುವ ಕುರಿತು ಅಧ್ಯಯನ ನಡೆಸಿ, ಮನೆ ಮುಂದೆ ನಿಲ್ಲಿಸುವ ದುಬಾರಿ ಬೆಲೆಯ ಕಾರುಗಳನ್ನು ಕದಿಯುತ್ತಿದ್ದ ಅಂತಾರಾಜ್ಯ ಖದೀಮನನ್ನು ಹುಳಿಮಾವು ಪೊಲೀಸರು ಸೆರೆ ಹಿಡಿದಿದ್ದಾರೆ.
ತಮಿಳುನಾಡಿನ ತಿರುಚ್ಚಿ ಮೂಲದ ರಾಹುಲ್ ಕುದ್ದುಸ್ ಬಂಧಿತ. ಈತ ಕಾರು ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಅಲ್ಲದೆ, ಸಹಚರರೂ ಸಹ ಇದಕ್ಕೆ ಸಹಾಯ ಮಾಡುತ್ತಿದ್ದರು. ಈತ ಕೇವಲ ಟೊಯೋಟಾ ಕಂಪನಿ ಕಾರುಗಳನ್ನೇ ಕದಿಯುತ್ತಿರುವುದು ವಿಚಾರಣೆಯಲ್ಲಿ ಬಯಲಾಗಿದೆ.
ಕಾರುಗಳನ್ನು ಕದ್ದು ತಮಿಳುನಾಡಿನ ತಿರುಚ್ಚಿಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಖದೀಮ ಬಳಿಕ ಇಂಜಿನ್ ನಂಬರ್ ಹಾಗೂ ಚಾರ್ಸಿ ನಂಬರ್ ಬದಲಾಯಿಸಿ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ. ಆರೋಪಿಯಿಂದ 2.50 ಕೋಟಿ ರೂ. ಬೆಲೆಯ 14 ಕಾರುಗಳನ್ನು ಜಪ್ತಿ ಮಾಡಲಾಗಿದೆ.