ಬೆಂಗಳೂರು:ದಕ್ಷಿಣ ವಿಭಾಗ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ 26 ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಡ್ರಗ್ ಮಾರಾಟ ಮಾಡುತ್ತಿರುವ ಜಾಲ ಬಹಳಷ್ಟು ವಿಸ್ತಾರವಾಗುತ್ತಿದ್ದು, ಕಳೆದೆರಡು ದಿನಗಳಿಂದ ನಗರ ಪೊಲೀಸರು ಕಾರ್ಯಚರಣೆ ನಡೆಸಿ ಡ್ರಗ್ ಪೆಡ್ಲರ್ಗಳ ಹೆಡೆಮುರಿಕಟ್ಟಿದ್ದಾರೆ. ಇತ್ತೀಚೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಡ್ರಗ್ ವಿಚಾರವನ್ನ ಗಂಭೀರವಾಗಿ ತೆಗೆದುಕೊಳ್ಳುವಂತೆ ಹಿರಿಯ ಪೊಲಿಸರಿಗೆ ತಾಕೀತು ಮಾಡಿದ್ದರು.
ಇದರಿಂದ ಕಾರ್ಯಪ್ರವೃತ್ತರಾದ ಪೊಲೀಸರು ತಲಘಟ್ಟಪುರ ವ್ಯಾಪ್ತಿಯಲ್ಲಿ 3 ಪ್ರಕರಣ, ಜೆ.ಪಿನಗರ 3, ಜಯನಗರ 2, ಸಿದ್ದಾಪುರ 6, ಕೋಣನಕುಂಟೆ 1, ವಿವಿಪುರಂ 1, ಬನಶಂಕರಿ 1, ಸಿ.ಕೆ ಅಚ್ಚುಕಟ್ಟು 3, ಹನುಮಂತ ನಗರ 1 ಪ್ರಕರಣ ಪತ್ತೆ ಹಚ್ವಿ ಆರೋಪಿಗಳ ವಿರುದ್ಧ ಎನ್ ಡಿ ಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.
ಇನ್ನು ಸಧ್ಯ ಬಂಧಿತ ಆರೋಪಿಗಳು ನಗರದ ಪ್ರತಿಷ್ಟಿತ ಕಾಲೇಜು, ಉದ್ಯಮಿಗಳನ್ನ ಟಾರ್ಗೇಟ್ ಮಾಡಿಕೊಂಡು ಹೆಚ್ವಿನ ಹಣಕ್ಕೆ ಗಾಂಜಾ ಮಾರಾಟ ಮಾಡುತ್ತಿದ್ದ ವಿಚಾರ ತಿಳಿದು ಬಂದಿದೆ.