ಶಿರಸಿ (ಉತ್ತರ ಕನ್ನಡ): ಜಾತಿ ನಿಂದನೆ, ಹಣದ ಬೇಡಿಕೆ, ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರ್.ಟಿ.ಐ. ಕಾರ್ಯಕರ್ತ ಅಂದರ್ ಆಗಿದ್ದಾನೆ. ಜಿಲ್ಲೆಯ ಯಲ್ಲಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಯಲ್ಲಾಪುರದ ಮಂಗೇಶ್ ಕೈಸರೆ ಬಂಧಿತ ಆರ್.ಟಿ.ಐ. ಕಾರ್ಯಕರ್ತ. ಈತನ ವಿರುದ್ಧ ಜಮೀನಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬೆದರಿಕೆವೊಡ್ಡಿ, ಜಾತಿ ನಿಂದನೆ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ಮಂಗೇಶ್ ಕೈಸೆರೆಯನ್ನು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ಯಲ್ಲಾಪುರ ತಾಲೂಕಿನ ಬೆಳಕೊಪ್ಪದ ನಾಗರಾಜ ಶಿವಾ ನಾಯ್ಕ ಎಂಬುವನನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿ ಮಂಗೇಶ್ ಕೈಸೆರೆ ವಿರುದ್ಧ ಪಟ್ಟಣ ಪಂಚಾಯತ್ ಸದಸ್ಯ ಸಯ್ಯದ್ ಕೈಸರ್ ಹಾಗೂ ಅತನ ಸಹೋದರಿ ರಜಿಯಾ ಮುಸ್ತಾಕ್ ಶೇಖ್ ಎಂಬುವರಿಗೆ, 25 ಸಾವಿರ ರೂಪಾಯಿ ಹಣ ನೀಡದಿದ್ದರೆ ಅವರ ವಿರುದ್ಧ ಪತ್ರಿಕೆಗಳಲ್ಲಿ ಪ್ರಕಟಿಸುತ್ತೇನೆ ಎಂದು ಬೆದರಿಕೆವೊಡ್ಡಿದ್ದ ಎಂಬ ಆರೋಪದಡಿ ದೂರು ದಾಖಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಮಂಗೇಶ್ ಹಾಗೂ ಆತನ ಸಹಚರರಾದ ಮಂಜುನಾಥ ಲಕ್ಷ್ಮಣ ನಾಯಕ, ವಿಶ್ವೇಶ್ವರ ಗಾಂವ್ಕರ್ ಹಾಗೂ ಹರೀಶ್ ಕೈಸರೆ ಜೊತೆ ಸೇರಿಕೊಂಡು ವ್ಯಕ್ತಿವೋರ್ವನಿಗೆ ತನ್ನನ್ನು ಕೇಳದೆ ಭೂಮಿ ಖರೀದಿಸಿದ್ದೀರಿ. ಈ ಭೂಮಿ ನಾನು ಖರೀದಿಸಿದ್ದು, ವ್ಯವಹಾರ ಬಗೆಹರಿಸಬೇಕಾದರೆ 2 ಲಕ್ಷ ರೂಪಾಯಿ ನೀಡಬೇಕು. ಇಲ್ಲವಾದರೆ ಏನು ಬೇಕಾದರೂ ಮಾಡಬಲ್ಲೆವು ಎಂದು ಬೆದರಿಕೆ ಹಾಕಿದ್ದ ಎನ್ನಲಾಗ್ತಿದೆ. ಇದಕ್ಕೆ ಹೆದರಿದ ಆ ವ್ಯಕ್ತಿ 10 ಸಾವಿರ ರೂಪಾಯಿ ನೀಡಿದ್ದಾಗಿ ದೂರು ದಾಖಲಾಗಿತ್ತು.
ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಮಂಗೇಶ್ ಕೈಸರೆಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.