ಸಕಲೇಶಪುರ: ತಾಲೂಕಿನ ಬಂಧಿಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ಸೋಮವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಕಲೇಶಪುರ: ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವ - ನಾನಾ ಅನುಮಾನ - ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಅನುಮಾನಸ್ಪದ ಸಾವು
ತಾಲೂಕಿನ ಬೆಳಗೋಡು ಹೋಬಳಿಯ ಬಂದಿಹಳ್ಳಿ ಗ್ರಾಮದಲ್ಲಿ ಕೆರೋಡಿ ಗ್ರಾಮದ ಶರತ್ (30) ಎಂಬುವವನು ನೇಣುಬಿಗಿದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನೆ ವಿವರ: ಶರತ್, ಬಂಧಿಹಳ್ಳಿ ಗ್ರಾಮದ ಗಂಡನನ್ನು ಕಳೆದುಕೊಂಡ ಮಹಿಳೆಯೊಬ್ಬರ ಮನೆಗೆ ಆಗಾಗ ಹೋಗಿ ಬರುತ್ತಿದ್ದನೆಂದು ತಿಳಿದು ಬಂದಿದ್ದು, ಇದೇ ರೀತಿ ಸೋಮವಾರ ರಾತ್ರಿ ಕೂಡ ಮಹಿಳೆಯ ಮನೆಗೆ ಬಂದು ತಂಗಿದ್ದಾನೆ. ತಡರಾತ್ರಿ ಮನೆಯೊಳಗೇ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ದೇಹ ದೊರಕಿದೆ. ತಕ್ಷಣ ಸ್ಥಳೀಯರು ಗ್ರಾಮಾಂತರ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಕಾಫರ್ಡ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಕೇಸ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ವರದಿ ಹಾಗೂ ಪೊಲೀಸರ ತನಿಖೆ ನಂತರ ಸಾವಿನ ನಿಖರ ಮಾಹಿತಿ ಗೊತ್ತಾಗಬೇಕಿದೆ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.