ಬೆಂಗಳೂರು: ಯಮಹಾ ಆರ್ಎಕ್ಸ್ ಬೈಕ್ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ಗುಂಪೊಂದು ನಗರದಲ್ಲಿ ಸಕ್ರಿಯವಾಗಿದೆ.
ಆಡುಗೋಡಿ ಹಾಗೂ ಕೋರಮಂಗಲ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ಆರ್ಎಕ್ಸ್ ಬೈಕ್ಗಳನ್ನು ಖದೀಮರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಬೈಕ್ ಕಳ್ಳತನದ ಸಿಸಿಟಿವಿ ದೃಶ್ಯಾವಳಿ ಆಡುಗೋಡಿಯ ಲಕ್ಕಸಂದ್ರ ನಿವಾಸಿ ನಾಸೀರ್ ಅವರು ಇತ್ತೀಚೆಗೆ ಬೈಕ್ ಕಳೆದುಕೊಂಡಿದ್ದರು. ಕಳೆದ ತಿಂಗಳು ಜುಲೈ 31ರಂದು ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಇದೇ ಅವಕಾಶಕ್ಕಾಗಿ ಹೊಂಚು ಹಾಕಿದ್ದ ಖದೀಮ, ಬೈಕ್ನಲ್ಲಿ ಬಂದು ಆರ್ಎಕ್ಸ್ ಬೈಕ್ ನಿಲ್ಲಿಸಿದ್ದ ಪಕ್ಕದಲ್ಲಿ ತನ್ನ ಬೈಕ್ ಪಾರ್ಕ್ ಮಾಡುತ್ತಾನೆ. ನಂತರ ಆರ್ಎಕ್ಸ್ ಬೈಕ್ ಅನ್ನು ನಿಧಾನವಾಗಿ ತಳ್ಳಿ ಸ್ಟಾರ್ಟ್ ಮಾಡಿಕೊಂಡು ಹೊರಟು ಹೋಗುತ್ತಾನೆ. ಕೆಲ ನಿಮಿಷಗಳ ಬಳಿಕ ಬಂದು ತನ್ನ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಈ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಇಮ್ರಾನ್ ಖಲೀಲ್ ಎಂಬುವವರ ಆರ್ಎಕ್ಸ್ ಬೈಕ್ ಕಳವಾಗಿದೆ. ಎರಡೂ ಬೈಕ್ಗಳನ್ನು ಒಂದೇ ಶೈಲಿಯಲ್ಲಿ ಕಳ್ಳತನ ಮಾಡಲಾಗಿದ್ದು, ಇದರ ಹಿಂದೆ ಒಂದೇ ತಂಡ ಇರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಯಲ್ಲಿ ಆರ್ಎಕ್ಸ್ ಬೈಕ್ಗಳಿಗೆ ಭಾರೀ ಬೇಡಿಕೆ ಇದೆ. ಹಳೆಯ ಆರ್ಎಕ್ಸ್ ಬೈಕ್ ಬೆಲೆ 20-25 ಸಾವಿರ ರೂ.ಯಷ್ಟಿದ್ದು, ಅದನ್ನು ಆಲ್ಟ್ರೇಷನ್ ಮಾಡಿ ಲಕ್ಷ ರೂ.ಗೆ ಮಾರಾಟ ಮಾಡಬಹುದು. ಹೊಸ ಮಾಡೆಲ್ ಬೈಕ್ಗಿಂತ ಹಳೆಯ ಬೈಕ್ ಇಷ್ಟಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಬೈಕ್ಗಳನ್ನು ಗುರಿಯಾಗಿಸಿ ಕಳ್ಳತನ ನಡೆಯುತ್ತಿದೆ.
ನಗರದಲ್ಲಿರುವ ಶೇ 50ರಷ್ಟು ಆರ್ಎಕ್ಸ್ ಬೈಕ್ಗಳಿಗೆ ದಾಖಲಾತಿಯಿಲ್ಲ. ಹೀಗಾಗಿ ಬೈಕ್ ಕಳುವಾದರೆ ಪೊಲೀಸರು ದಾಖಲಾತಿ ಕೇಳುತ್ತಾರೆ ಎಂದು ಕಳೆದುಕೊಂಡವರು ದೂರು ಸಹ ನೀಡುವುದಿಲ್ಲ. ದಾಖಲಾತಿ ಇರುವವರು ಮಾತ್ರ ದೂರು ನೀಡಲು ಮುಂದೆ ಬರುತ್ತಾರೆ. ಹೀಗಾಗಿ ಖದೀಮರು ಆರ್ಎಕ್ಸ್ ಬೈಕ್ಗಳ ಹಿಂದೆ ಬಿದ್ದಿದ್ದಾರೆ. ಈ ಕುರಿತು ಆಡುಗೋಡಿ, ಕೋರಮಂಗಲ ಸೇರಿದಂತೆ ಹಲವು ಕಡೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.