ಹಾಸನ:ಆನ್‌ಲೈನ್ ವ್ಯವಹಾರದಲ್ಲಿ ವಂಚಿಸುತ್ತಿದ್ದ ದರೋಡೆಕೋರರು ಈಗ ಆನ್ಲೈನ್ನಲ್ಲಿ ಪ್ರೀವೆಡ್ಡಿಂಗ್ ಬುಕ್ಕಿಂಗ್ ಮೂಲಕ ದರೋಡೆ ಮಾಡಿದ್ದಾರೆ.
ಹಾಸನದ ಕ್ಯಾಮರಾಮನ್ಗಳು ವಂಚನೆಗೊಳಗಾದವರು.ಜಸ್ಟ್ ಡಯಲ್ ಮೂಲಕ ಪ್ರೀವೆಡ್ಡಿಂಗ್ ಶೂಟ್ಗಾಗಿ ಬುಕ್ ಮಾಡಿ ಕ್ಯಾಮರಾಮನ್ಗಳನ್ನು ಅವರ ಮನೆ ಬಳಿಗೇ ಹೋಗಿ ಪಿಕ್‌ಅಪ್ ಮಾಡಿ, ದಾರಿ ಮಧ್ಯೆ ಕಣ್ಣಿಗೆ ಖಾರದ ಪುಡಿ ಎರಚಿ, ಲಾಂಗು ಮಚ್ಚುಗಳನ್ನ ತೋರಿಸಿ ಅವರ ಬಳಿಯಿದ್ದ ಡ್ರೋಣ್ ಕ್ಯಾಮರಾ, ಸ್ಟಿಲ್ ಫೋಟೋ ಕ್ಯಾಮೆರಾ, ಚಿನ್ನದ ಒಡವೆಗಳನ್ನ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನ ದೋಚಿ ಎಸ್ಕೇಪ್ ಆಗಿದ್ದಾರೆ.
ಪ್ರೀವೆಡ್ಡಿಂಗ್ ಶೂಟ್ ಹೆಸರಿನಲ್ಲಿ ದರೋಡೆ.. ಹಾಸನ ತಾಲೂಕಿನ ಶಂಕರನಹಳ್ಳಿ ಸಮೀಪದಲ್ಲಿರುವ ಪದ್ಮಿನಿ ಸ್ಟುಡಿಯೋ ಓನರ್ಗೆ ಜಸ್ಟ್ ಡಯಲ್ ಮೂಲಕ ವಿವರ ತೆಗೆದುಕೊಂಡು 5 ಸಾವಿರ ರೂ. ಹಣ ಹಾಕಿ ಪ್ರೀವೆಡ್ಡಿಂಗ್ ಶೂಟ್ ಗಾಗಿ ಬುಕ್ ಮಾಡಿದ್ದರು. ಬೆಳಗ್ಗೆ ನಾವೇ ಹಾಸನಕ್ಕೆ ಬಂದು ಪಿಕ್ಅಪ್ ಮಾಡುತ್ತೇವೆಂದು ಮಾತುಕತೆ ಮಾಡಿಕೊಂಡಿದ್ದಾರೆ. ಅದರಂತೆ ನಾಲ್ಕು ಮಂದಿಯ ತಂಡ ಬೆಳಗ್ಗೆ 5ರ ಸುಮಾರಿನಲ್ಲಿ ನಗರದಲ್ಲಿ ಉಮೇಶ್ ಹಾಗೂ ವಿಕ್ರಂ ಎಂಬ ಇಬ್ಬರನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ. ಹುಡುಗ-ಹುಡುಗಿ ನೇರ ಶೆಟ್ಟಿಹಳ್ಳಿ ಚರ್ಚ್ ಸ್ಪಾಟ್ಗೆ ಬರುತ್ತಾರೆ ಎಂದು ಹೇಳಿದ್ದಾರೆ. ನಂತರ ಹೋಗೋ ಮಾರ್ಗ ಮಧ್ಯೆ ಯಾರೂ ಇಲ್ಲದ ಸಮಯ ನೋಡಿ ಇಬ್ಬರ ಮೇಲೂ ಹಲ್ಲೆ ಮಾಡಿ ಅವರ ಬಳಿ ಇದ್ದ ಬೆಲೆಬಾಳುವ ಎಲ್ಲ ವಸ್ತುಗಳನ್ನು ದರೋಡೆ ಮಾಡಿದ್ದಾರೆ.
ಬಳಿಕ ಉಮೇಶ್ ಹಾಗೂ ವಿಕ್ಕಿ ಇಬ್ಬರೂ ಗೋರೂರು ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಿದ್ದಾರೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಛಾಯಾಗ್ರಾಹಕ ಸಂಘದ ಅಧ್ಯಕ್ಷ ಸ್ವಾಮಿ ಅವರು, ಯಾರೂ ಕೂಡಾ ಫೋಟೊ ಶೂಟ್ಗಳನ್ನು ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವಕ - ಯುವತಿಯರು ಪ್ರೀ ವೆಡ್ಡಿಂಗ್ ಶೂಟಿಂಗ್ಗಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡ ಖದೀಮರ ಗ್ಯಾಂಗ್, ಲಕ್ಷಾಂತರ ಮೌಲ್ಯದ ಕ್ಯಾಮೆರಾಗಳನ್ನ ಪ್ರೀ ವೆಡ್ಡಿಂಗ್ ಎಂಬ ಹೆಸರಲ್ಲಿ ದೋಚಿ ಹೋಗಿದೆ.