ಚೆನ್ನೈ (ತಮಿಳುನಾಡು): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಅಪರಾಧಿ ಎ.ಜಿ.ಪೇರರಿವಾಲನ್ಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಬೇಕೇ ಎಂಬುದನ್ನು ಇನ್ನು ಮೂರ್ನಾಲ್ಕು ದಿನಗಳಲ್ಲಿ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ತೀರ್ಮಾನಿಸಲಿದ್ದಾರೆ.
ತಮಿಳುನಾಡು ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ಮೂರರಿಂದ ನಾಲ್ಕು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದು, ಈ ಕುರಿತು ವರದಿ ಸಲ್ಲಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಂದು ತಿಳಿಸಿದ್ದಾರೆ. ನ್ಯಾಯಪೀಠ ಈ ವಿಷಯದ ವಿಚಾರಣೆಯನ್ನು ಮುಂದಿನ ನಾಲ್ಕು ವಾರಗಳವರೆಗೆ ಮುಂದೂಡಿದೆ.
ಇದನ್ನೂ ಓದಿ: ಬೆಂಗಳೂರು ಗಲಭೆ ಪ್ರಕರಣ: ಸಿಸಿಬಿಯಿಂದ ಮತ್ತೊಬ್ಬ ಆರೋಪಿಯ ಬಂಧನ
1991ರ ಮೇ 21ರಂದು ತಮಿಳುನಾಡಿನ ಪೆರಂಬುದೂರು ಬಳಿ ಚುನಾವಣಾ ರ‍್ಯಾಲಿ ವೇಳೆ ಮಾನವ ಬಾಂಬ್ ಸ್ಫೋಟಿಸಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿದ್ದ 26 ಮಂದಿಗೆ ಟಾಡಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ನಂತರ ಸುಪ್ರೀಂ ಕೋರ್ಟ್ ಮೂವರ ಗಲ್ಲನ್ನು ಮಾತ್ರ ಕಾಯಂಗೊಳಿಸಿ, ನಾಲ್ವರ ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಮಾರ್ಪಡಿಸಿತ್ತು. ಉಳಿದ 19 ಮಂದಿಯನ್ನು ಬಿಡುಗಡೆಗೊಳಿಸಿತ್ತು. ಬಿಡುಗಡೆ ಆದವರಲ್ಲಿ ಮೂವರು ಮೃತಪಟ್ಟಿದ್ದಾರೆ.
2015ರಲ್ಲೇ ತಮಿಳುನಾಡು ಗನರ್ವರ್ಗೆ ಕ್ಷಮಾದಾನ ನೀಡುವಂತೆ ಕೋರಿ ಪೇರರಿವಾಲನ್ ಅರ್ಜಿ ಸಲ್ಲಿಸಿದ್ದ.