ಮುಜಾಫರ್ನಗರ:ಗರ್ಭಿಣಿಯ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಗಂಗಾ ಕಾಲುವೆಗೆ ಎಸೆದಿರುವ ಘಟನೆ ಮುಜಾಫರ್ನಗರದಲ್ಲಿ ನಡೆದಿದೆ.
ವರದಕ್ಷಿಣೆ ತರಲು ನಿರಾಕರಿಸಿದ ಗರ್ಭಿಣಿಯ ಕತ್ತು ಹಿಸುಕಿ ಆಕೆಯ ಪತಿ ಮತ್ತು ಅಳಿಯನೇ ಹತ್ಯೆ ಮಾಡಿದ್ದಾರೆ. ಬಳಿಕೆ ಗಂಗಾ ಕಾಲುವೆಗೆ ಎಸೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಮಹಿಳೆ ನೇಹಾ (30) ಎನ್ನಲಾಗುತ್ತಿದೆ. ಮೃತಳ ತಂದೆ ನಾಲ್ಕು ವರ್ಷಗಳ ಹಿಂದೆ ಕಮಲ್ ಎಂಬುವವರ ಜೊತೆ ವಿವಾಹ ಮಾಡಿಸಿದ್ದರು. ಆದರೆ ಪತಿಯ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಎಸ್‌ಹೆಚ್‌ಒ ರಾಜೇಂದರ್ ಗಿರಿ ತಿಳಿಸಿದ್ದಾರೆ.
ವರದಕ್ಷಿಣೆ ವಿಷಯವಾಗಿ ಕುಟುಂಬಸ್ಥರೇ ತಮ್ಮ ಮಗಳನ್ನು ಕೊಂದಿದ್ದಾರೆ ಎಂದು ಮೃತಳ ತಂದೆ ಆರೋಪಿಸಿದ್ದಾರೆ. ವಿಚಾರಣೆ ವೇಳೆ ಪತಿ ನೇಹಾಳನ್ನು ಕೊಂದಿದ್ದಾಗಿ ಮತ್ತು ಆಕೆಯ ದೇಹವನ್ನು ಗಂಗಾ ಕಾಲುವೆಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ.
ಪತಿ, ಅತ್ತೆ, ಮಾವ ಮತ್ತು ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಮಲ್‌ನನ್ನು ಬಂಧಿಸಲಾಗಿದೆ. ನೇಹಾ ದೇಹ ಪತ್ತೆ ಹಚ್ಚಲು ಪ್ರಯತ್ನಿಸಲಾಗಿದೆ. ಮತ್ತೊಂದು ಘಟನೆಯಲ್ಲಿ ಶುಕ್ರವಾರ ಸಂಜೆ ರಾಜ್ಭಾದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.
ಮಹಿಳೆಯು 20 ವರ್ಷದ ವಯೋಮಾನದವಳಂತೆ ಕಾಣಿಸುತ್ತಾಳೆ. ಪ್ರಾಥಮಿಕ ತನಿಖೆಯಲ್ಲಿ ಇವಳನ್ನು ಕೊಂದು ಬಳಿಕ ಕಾಲುವೆಗೆ ಎಸೆಯಲಾಗಿದೆ ಎಂಬಂತೆ ತೋರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.