ದಿಬ್ರುಗರ್:ಅಸ್ಸೋಂನ ದಿಬ್ರುಗರ್ ಜಿಲ್ಲೆಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನವಜಾತ ಶಿಶು ಮೃತಪಟ್ಟಿದೆ.
ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ನವಜಾತ ಶಿಶು ಬಲಿ
ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿಯ ಪ್ರಮಾಣ ಹೆಚ್ಚದಂತೆ ತಡೆಯಲು ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸಿದ್ದು, ಪರಿಣಾಮ ಐಸಿಯುನಲ್ಲಿದ್ದ 3 ದಿನದ ಹಸುಗೂಸು ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್ನಿಂದಾಗಿ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಪ್ರಮಾಣ ಹೆಚ್ಚದಂತೆ ತಡೆಯಲು ಆಸ್ಪತ್ರೆಯ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸಿದ್ದಾರೆ. ಪರಿಣಾಮ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿದ್ದು, ತೀವ್ರ ನಿಗಾ ಘಟಕ (ಐಸಿಯು)ದಲ್ಲಿದ್ದ 3 ದಿನದ ಹಸುಗೂಸು ಕೊನೆಯುಸಿರೆಳೆದಿದೆ.
ಗರ್ಭಿಣಿಯರು, ತಮ್ಮ ಕಂದಮ್ಮಗಳೊಂದಿಗೆ ಬಾಣಂತಿಯರು ಸೇರಿದಂತೆ ಅನೇಕ ರೋಗಿಗಳು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಹೊರಗೆ ಓಡಿದ್ದಾರೆ. ಈ ವೇಳೆ ಅನೇಕರು ಗಾಯಗೊಂಡಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.