ಮುಂಬೈ (ಮಹಾರಾಷ್ಟ್ರ): ನಕಲಿ ಟಿಆರ್‌ಪಿ ಹಗರಣ ಸಂಬಂಧ ಇದೀಗ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್‌ಚಂದಾನಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ)ನಲ್ಲಿ ವಂಚನೆ ಆರೋಪದಡಿ ಖನ್‌ಚಂದಾನಿಯನ್ನು ಮುಂಬೈ ಪೊಲೀಸರು ಈ ಹಿಂದೆ ವಿಚಾರಣೆಗೊಳಪಡಿಸಿದ್ದರು. ಇದೀಗ ಅರೆಸ್ಟ್ ಮಾಡಿದ್ದು, ಖನ್‌ಚಂದಾನಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ರಿಪಬ್ಲಿಕ್ ಟಿವಿ ಸೇರಿದಂತೆ ಕೆಲ ಚಾನಲ್ಗಳು ಟಿಆರ್‌ಪಿಯಲ್ಲಿ ವಂಚನೆ ನಡೆಸಿವೆ ಎಂದು ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾ ಆರೋಪಿಸಿ ಕೇಸ್ ದಾಖಲಿಸಿತ್ತು. ವೀಕ್ಷಕರ ಡೇಟಾವನ್ನು ಸಂಗ್ರಹಿಸಲು ಮೀಟರ್ ಸ್ಥಾಪಿಸಲಾದ ಕೆಲವು ಮನೆಗಳಲ್ಲಿ ನಿರ್ದಿಷ್ಟ ಚಾನೆಲ್‌ಗೆ ಟ್ಯೂನ್ ಮಾಡಲು ಲಂಚ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಜಾಹೀರಾತುದಾರರಿಗೆ ಆಮಿಷವೊಡ್ಡಲು, ಟಿಆರ್‌ಪಿ ಹೆಚ್ಚಿಸಿಕೊಳ್ಳಲು ವಂಚನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಟಿಆರ್‌ಪಿ ರೇಟಿಂಗ್ ಹಗರಣ: ಮನಿ ಲಾಂಡರಿಂಗ್ ದೂರು ದಾಖಲಿಸಿದ ಇಡಿ
ಹಗರಣ ಸಂಬಂಧ ಈ ಹಿಂದೆ ಬಂಧನವಾಗಿದ್ದ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ವಿತರಣಾ ವಿಭಾಗದ ಮುಖ್ಯಸ್ಥ ಘಾನ್ಶ್ಯಾಮ್ ಸಿಂಗ್ಗೆ ಡಿಸೆಂಬರ್ 5ರಂದು ನ್ಯಾಯಾಲಯ ಜಾಮೀನು ನೀಡಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಘಾನ್ಶ್ಯಾಮ್, ವಿಚಾರಣೆ ವೇಳೆ ಮುಂಬೈ ಪೊಲೀಸರು ನನಗೆ ಚಿತ್ರಹಿಂಸೆ ನೀಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಬಾಂಬೆ ಹೈಕೋರ್ಟ್ಗೆ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ಅರ್ಜಿ ಸಲ್ಲಿಸಿದೆ.