ಗಂಗಾವತಿ(ಕೊಪ್ಪಳ):ಇಂದು ವಿಶ್ವ ಅಪ್ಪಂದಿರ ದಿನ ಅಂತ ಮಕ್ಕಳೆಲ್ಲ ಫಾದರ್ಸ್ ಡೇ ಆಚರಿಸ್ತಿದ್ದಾರೆ. ಆದ್ರೆ ತಂದೆ ಎಲ್ಲ ಮಕ್ಕಳ ಪಾಲಿಗೆ ದೇವರಾಗಲಾರ. ಯಾಕಂದ್ರೆ ಮನುಷ್ಯತ್ವ ಮರೆತ ದುಷ್ಟ ಅಪ್ಪನ ಕಾಮದಾಸೆಗೆ ಬಲಿಯಾಗಿ ಮಗಳು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಪ್ರಪಂಚದಲ್ಲಿ ಹೆತ್ತ ಮಗಳನ್ನೂ ಬಿಡದ ಎಷ್ಟೋ ಪಾಪಿ ತಂದೆಗಳಿದ್ದಾರೆ ಎಂಬುದೇ ಒಂದು ದೊಡ್ಡ ದುರಂತ. ಜೊತೆಗೆ ಅರಗಿಸಿಕೊಳ್ಳಲಾಗದ ಕಹಿ ಸತ್ಯ. ಕುಡಿದ ಮತ್ತಿನಲ್ಲಿ ಮಗಳು ಅಂತಲೂ ನೋಡದೇ 14 ವರ್ಷದ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರಗೈದ ಪಾಪಿ ತಂದೆ ವಿರುದ್ಧ ಇದೀಗ ದೂರು ದಾಖಲಾಗಿದೆ.
ತಂದೆಯಿಂದಲೇ ಮಗಳು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಘಟನೆ ತಿಳಿಯುತ್ತಿದ್ದಂತೆ ಗಂಗಾವತಿ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಈ ಕುರಿತು ಚರ್ಚಿಸಿ ಕೊನೆಗೆ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆಯ ತಾಯಿ ಹಾಗೂ ಅಪ್ರಾಪ್ತ ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಂದೆಯ ದೈಹಿಕ ಸಂಪರ್ಕದಿಂದ ಮಗು ಜನಿಸಿದೆ ಎಂದು ದೂರು ನೀಡಿದ್ದಾರೆ. ಸಂತ್ರಸ್ತರ ಹೇಳಿಕೆ ಹಾಗೂ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಅಧಿಕಾರಿಗಳ ದೂರು ಉಲ್ಲೇಖಿಸಿ ಇದೀಗ ಪೊಲೀಸರು ಕೊಪ್ಪಳ ತಾಲೂಕಿನ ವೆಂಕಟಾಪುರ ಗ್ರಾಮದ ಆರೋಪಿ ತಂದೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.