ಗದಗ: ಆಸ್ತಿಗಾಗಿ 10 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಹೊಲಕ್ಕೆ ಕರೆದುಕೊಂಡು ಹೋಗಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದ ನಿವಾಸಿಯಾದ ತೌಸಿಫ್ ಅದರಗುಂಚಿ(10) ಎನ್ನುವ ಬಾಲಕನನ್ನು ಅವರ ಚಿಕ್ಕಪ್ಪನಾದ ಅಕ್ಬರಬಾಷಾ ಎನ್ನುವಾತ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಪಾಲಕರು ಆರೋಪ ಮಾಡಿದ್ದಾರೆ.
ಕೊಲೆ ಯತ್ನ ನಡೆಸಿದ ಚಿಕ್ಕಪ್ಪ1 ತೀವ್ರ ಜ್ವರದ ಕಾರಣ ಶಾಲೆಯಲ್ಲಿ ಶಿಕ್ಷಕರು ಬಾಲಕ ತೌಸಿಫ್ ಅದರಗುಂಚಿಗೆ ರಜೆ ಕೊಟ್ಟು ಮನೆಗೆ ಕಳಸಿದ್ದಾರೆ. ಈ ಸಮಯದಲ್ಲಿ ಬಾಲಕನ ಚಿಕ್ಕಪ್ಪನಾದ ಅಕ್ಬರಬಾಷಾ ತನ್ನ ಬೈಕ್ನಲ್ಲಿ ಕೂಡಿಸಿಕೊಂಡು ಗುಜಮಾಗಡಿ ಮತ್ತು ಡಸ ಹಡಗಲಿ ಗ್ರಾಮದ ಹೊರವಲಯದ ಜಮೀನಿನಲ್ಲಿ ತೌಸಿಫ್ನ ಕಾಲು ಕಟ್ಟಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಬಾಲಕ ಮೂರ್ಛೆ ಹೋಗಿ ಬಿದ್ದಿದ್ದರಿಂದ ಅವನನ್ನು ಅಲ್ಲೆ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.
ಹೀಗೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರೋ ತೌಸಿಫ್ನನ್ನು ದಾರಿಹೋಕರು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಬಾಲಕ ಗದಗದ ಜಿಮ್ಸನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೂಲತಃ ಬಸಾಪೂರ ಗ್ರಾಮದವನಾದ ತೌಸೀಫ್ನನ್ನು ಅವರ ದೊಡ್ಡಮ್ಮ ಹುಸೇನಬಿ ತಮ್ಮ ಮನೆಯಲ್ಲಿ ಸಾಕುತ್ತಿದ್ದಾರೆ.
4 ಹೆಣ್ಣು ಮಕ್ಕಳಿರುವ ಅಣ್ಣನ ಆಸ್ತಿ ಎಲ್ಲಿ ಈ ಬಾಲಕನಿಗೆ ಹೊಗುತ್ತೋ ಅಂತ ಅಕ್ಬರಬಾಷಾ ಈ ಕೃತ್ಯ ಎಸಗಿದ್ದಾನೆ ಎಂಬುವುದು ಸಂಬಂಧಿಕರ ಆರೋಪ. ಈ ಕುರಿತು ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನೆರೆಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಕ್ಬರಬಾಷಾನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.