ಬಲ್ಲಿಯಾ (ಉತ್ತರ ಪ್ರದೇಶ): ಪತ್ರಕರ್ತ ರತನ್ ಸಿಂಗ್ರ ಹತ್ಯೆ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಹಿರಾ ಸಿಂಗ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೆ ಒಟ್ಟು 8 ಆರೋಪಿಗಳನ್ನು ಅರೆಸ್ಟ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಲ್ಕು ಪೊಲೀಸ್ ತಂಡಗಳು ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಂಡಿದ್ದು, ಉತ್ತರ ಪ್ರದೇಶ ಮತ್ತು ಬಿಹಾರ್ ರಾಜ್ಯಗಳ ಹಲವು ಭಾಗಗಳಲ್ಲಿ ದಾಳಿ ನಡೆಸಿವೆ. ಘಟನೆ ಸಂಬಂಧ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತ ಪತ್ರಕರ್ತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಆಗಸ್ಟ್ 24ರ ರಾತ್ರಿ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫ್ನಾ ಎಂಬಲ್ಲಿ ಪತ್ರಕರ್ತ ರತನ್ ಸಿಂಗ್ರನ್ನು ಗುಂಡಿಕ್ಕಿ ಕೊಂದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಘಟನೆಗೆ ಹಳೇ ದ್ವೇಷವೇ ಕಾರಣ ಎಂದು ಹೇಳಲಾಗಿದ್ದು, ತನಿಖೆ ಮುಂದುವರೆದಿದೆ.