ಧಾರವಾಡ: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಪ್ರೀತಿಯೇ ಈತನ ಪ್ರಾಣಕ್ಕೆ ಕಂಟಕವಾಯ್ತಾ ಅನ್ನೋ ಅನುಮಾನ ಇದೀಗ ದಟ್ಟವಾಗಿದೆ.
ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಿಗೆ ಗ್ರಾಮದ 20 ವರ್ಷದ ಸಂಜಯ್ ಕುಂಬಾರಕೊಪ್ಪ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾದವ. ಮಾರ್ಚ್ 19 ರಂದು ಹೊಲಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಸಂಜಯ್ ಬಳಿಕ ನಾಪತ್ತೆಯಾಗಿದ್ದ. ಮರುದಿನ ಮನೆಯವರು ಅಳ್ನಾವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಎರಡು ದಿನದ ನಂತರ ಇದೇ ಊರಿನ ಪಕ್ಕದ ಅರಣ್ಯದಲ್ಲಿ ಯುವಕನ ಶವ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಪ್ರೀತಿನೇ ಕಂಟಕವಾಯ್ತಾ? ಧಾರವಾಡದ ಕಾಲೇಜೊಂದರಲ್ಲಿ ಬಿಎ ಓದುತ್ತಿದ್ದ ಸಂಜಯ್, ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಇದು ಹುಡುಗಿ ಮನೆಯಲ್ಲಿ ಗೊತ್ತಾಗಿ ರಂಪಾಟವಾಗಿತ್ತಂತೆ. ಅಲ್ಲದೇ ಹಲವು ಬಾರಿ ಸಂಜಯ್ಗೆ ಎಚ್ಚರಿಕೆಯನ್ನೂ ನೀಡಿದ್ದರಂತೆ. ಆದರೆ ಸಂಜಯ್ ಪ್ರೀತಿಸುವುದನ್ನು ಬಿಟ್ಟಿರಲಿಲ್ಲ ಎನ್ನಲಾಗಿದೆ. ಸಂಜಯ್ ಸಾವು ಕೊಲೆ ಅನ್ನೋದು ಸ್ಪಷ್ಟವಾದ ಬಳಿಕ ಪೊಲೀಸರು ತನಿಖೆ ಕೈಗೊಂಡಿದ್ದರು. ಒಂದೆರಡು ದಿನ ಕಳೆದ ಬಳಿಕ ಸಣ್ಣದೊಂದು ಸುಳಿವಿನ ಮೂಲಕ ಇಬ್ಬರನ್ನು ವಶಕ್ಕೆ ಪಡೆದಾಗ ಸತ್ಯ ಬಯಲಾಗಿದೆ. ಹುಡುಗಿಯ ಅಣ್ಣ ಮತ್ತು ಸಂಬಂಧಿಯೇ ಕೃತ್ಯದ ಹಿಂದಿರುವುದು ಗೊತ್ತಾಗಿದೆ.
ಮಾರ್ಚ್ 19ರಂದು ಮಧ್ಯಾಹ್ನ ಅರಣ್ಯದಲ್ಲಿ ಕಾಡು ಕೋಳಿ ಬೇಟೆಗೆ ಬಲೆ ಹಾಕಿದ್ದಾಗಿ ಹೇಳಿ ವಿಜಯ ಕುಮಾರ್ ವಿಟೋಜಿ(20) ಎಂಬ ಗೆಳೆಯ ಸಂಜಯ್ ನನ್ನು ಕರೆಯುತ್ತಾನೆ. ಆತನೊಂದಿಗೆ ಕಾಡಿಗೆ ಹೋದಾಗ ಅದಾಗಲೇ ವಿಜಯ್ನ ಮಾವ ಶ್ರೀಧರ್ ಹಜೇರಿ(25) ಅಲ್ಲಿರುತ್ತಾನೆ. ಮೂವರೂ ಸೇರಿ ಅರಣ್ಯದ ಮಧ್ಯ ಭಾಗಕ್ಕೆ ಹೋಗುತ್ತಾರೆ. ಆಗ ತನ್ನ ತಂಗಿ ಹಿಂದೆ ಯಾಕೆ ಬಿದ್ದಿದ್ದೀಯ ಅಂತ ವಿಜಯ್ ಕೂಗಾಡುತ್ತಾನೆ. ಆಗ ಕೆಲ ಕಾಲ ಜಟಾಪಟಿ ಆಗುತ್ತೆ. ಕೂಡಲೇ ವಿಜಯ್ ತನ್ನ ಬಳಿ ಇದ್ದ ಟಾವೆಲ್ ತೆಗೆದುಕೊಂಡು ಶ್ರೀಧರ್ ಜೊತೆ ಸೇರಿ ಸಂಜಯ್ನ ಕುತ್ತಿಗೆಗೆ ಸುತ್ತಿ, ಉಸಿರುಗಟ್ಟಿಸಿದ್ದಾರೆ. ಬಳಿಕ ಗುದ್ದಲಿಯಿಂದ ಸಂಜಯ್ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಶವ ಸಿಕ್ಕ ಬಳಿಕ, ಸಂಜಯ್ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗುವಾಗ ಸಹಾಯದ ನೆಪದಲ್ಲಿ ಅವರ ಜೊತೆ ಹೋಗಿದ್ದರು. ಯಾವಾಗ ಪದೇ ಪದೇ ಸಂಜಯ್ ಕುಟುಂಬಕ್ಕೆ ಸಹಾಯ ಮಾಡಲು ಇವರಿಬ್ಬರೂ ಬರುತ್ತಿದ್ದಾರೆ ಎಂಬುದು ಗಮನಕ್ಕೆ ಬರುತ್ತೋ, ಆಗ ಅನುಮಾನಗೊಂಡ ಪೊಲೀಸರು ಇಬ್ಬರನ್ನೂ ವಿಚಾರಿಸಿದ್ದಾರೆ. ಆಗ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ, ಕಂಬಿ ಹಿಂದೆ ಕಳಿಸಲಾಗಿದೆ.