ಬೆಳಗಾವಿ:ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯ ಕಲಹ ಪ್ರಕರಣದಲ್ಲಿ ದೂರಿನ ಮೇರೆಗೆ ಬಂಧಿತನಾಗಿರುವ ಶಿವಾನಂದ ವಾಲಿ ಅಲಿಯಾಸ್ ಊದಿನಕಡ್ಡಿ ಶಿವಾನಂದ ಒಡೆತನದ 9 ಮ್ಯಾಕ್ಸಿ ಕ್ಯಾಬ್ ವಾಹನಗಳನ್ನು ಮಾಳಮಾರುತಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕೆ.ಕಲ್ಯಾಣ್ ದಾಂಪತ್ಯ ಕಲಹ ಪ್ರಕರಣ: ಶಿವಾನಂದ ವಾಲಿಗೆ ಸೇರಿದ್ದ 9 ಮ್ಯಾಕ್ಸಿಕ್ಯಾಬ್ ಜಪ್ತಿ.. ಕೆ.ಕಲ್ಯಾಣ್ ಪತ್ನಿ ಅಶ್ವಿನಿ, ಅತ್ತೆ-ಮಾವರನ್ನು ಅಪಹರಿಸಿ, ಪುಸಲಾಯಿಸಿ ಹಣ-ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಕೆ.ಕಲ್ಯಾಣ್ ಮನೆ ಕೆಲಸದಾಕೆ ಗಂಗಾ ಕುಲಕರ್ಣಿ, ಶಿವಾನಂದ ವಾಲಿ ವಿರುದ್ಧ ದೂರು ನೀಡಿದ್ದರು. ಕೆ.ಕಲ್ಯಾಣ್ ದೂರಿನ ಮೇರೆಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಶಿವಾನಂದ ವಾಲಿಯನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ ಕೆ.ಕಲ್ಯಾಣ್ ಪತ್ನಿ, ಅತ್ತೆ-ಮಾವನ ಅಕೌಂಟ್‌ನಿಂದ ಕೋಟ್ಯಂತರ ರೂಪಾಯಿ ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೇ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಪಡೆದು ಬ್ಯಾಂಕ್ನಲ್ಲಿ ಅಡವಿಟ್ಟಿದ್ದರು. ಸುಮಾರು 45 ಲಕ್ಷ ರೂಪಾಯಿ ಹಣವನ್ನು ಮೂವರ ಅಕೌಂಟ್‌ನಿಂದ ತನ್ನ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಂಡು 10 ಮ್ಯಾಕ್ಸಿಕ್ಯಾಬ್ ವಾಹನಗಳನ್ನು ಖರೀದಿಸಿದ್ದನು.
ಈ ಸಂಬಂಧ ಶಿವಾನಂದ ವಾಲಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಬಾಗಲಕೋಟೆಯ ಬೀಳಗಿಗೆ ತನಿಖೆಗೆ ಕರೆದೊಯ್ದು 9 ಮ್ಯಾಕ್ಸಿಕ್ಯಾಬ್ಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದಾರೆ. ಪೊಲೀಸರ ತನಿಖೆ ಮುಂದುವರೆದಿದ್ದು, ಜಪ್ತಿ ಮಾಡಿರುವ 09 ಮ್ಯಾಕ್ಸಿ ಕ್ಯಾಬ್ಗಳು ಬೇರೊಬ್ಬನ ಹೆಸರಿನಲ್ಲಿರುವುದು ಪತ್ತೆಯಾಗಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.