ಬಸವಕಲ್ಯಾಣ: ಹಗಲು ಹೊತ್ತಿನಲ್ಲಿಯೇ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ಕಳ್ಳಿಯರ ತಂಡ, ಅಂಗಡಿಯಲ್ಲಿನ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾದ ಘಟನೆ ನಗರದ ಗೋಲ್ಡ್ ಮಾರ್ಕೆಟ್ನಲ್ಲಿ ನಡೆದಿದೆ.
ಗ್ರಾಹಕರ ಸೋಗಿನಲ್ಲಿ ಯುವತಿಯರಿಂದ ಚಿನ್ನಾಭರಣ ಕಳವು, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ.. ನಗರದ ಸದಾನಂದ ಸ್ವಾಮಿ ಮಠದ ಪಕ್ಕದಲ್ಲಿರುವ ಗೋಲ್ಡ್ ಮಾರ್ಕೆಟ್ನ ಶ್ರೀ ವೀರಭದ್ರೇಶ್ವರ ಅಂಗಡಿಗೆ, ಸೋಮವಾರ ಮಧ್ಯಾಹ್ನ 4ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ನಾಲ್ವರು ಯುವತಿಯರ ತಂಡ, ಅಲ್ಮೆರಾದಲ್ಲಿ ಇಡಲಾಗಿದ್ದ ಬಾಕ್ಸ್ ಒಂದನ್ನು ಎಗರಿಸಿ ಅಲ್ಲಿಂದ ಪರಾರಿ ಆಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
ಅಂಗಡಿಗೆ ಬಂದ ಈ ಮಹಿಳೆಯರ ಪೈಕಿ ಓರ್ವ ಮಹಿಳೆ ತನ್ನ ಕಿವಿಯಲ್ಲಿನ ಓಲೆ ತೆಗೆದು ರಿಪೇರಿ ಮಾಡ್ತಿರಾ ಎಂದು ವ್ಯಾಪಾರಿಗೆ ವಿಚಾರಿಸಿದ್ದಾಳೆ. ಇದೇ ಸಮಯದಲ್ಲಿ ಹಿಂದೆ ನಿಂತಿದ್ದ ಯುವತಿಯರು ಅಲ್ಮೆರಾ ಕಡೆ ಕಣ್ಣು ಹಾಯಿಸಿ, ಚಿನ್ನದ ಆಭರಣಗಳುಳ್ಳ ಬಾಕ್ಸ್ ಎಗರಿಸಿ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಬಾಕ್ಸ್ ನಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳು ಇದ್ದು, ಮಹಿಳೆಯರು ಬಂದು ವಾಪಸ್ ತೆರಳಿದ ನಂತರ ಬಾಕ್ಸ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಅಂಗಡಿಯಲ್ಲಿ ಈ ಯುವತಿಯರು ನಡೆಸಿದ ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ನಗರ ಠಾಣೆ ಪಿಎಸ್ಐ ಗುರು ಪಾಟೀಲ, ಕ್ರೈಂ ಪಿಎಸ್ಐ ಅಲೀಮ ಸಾಬ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.