ಮಂಗಳೂರು:ಗುಪ್ತಾಂಗ ಹಾಗೂ ಒಳ ಉಡುಪಿನಲ್ಲಿ ಮರೆಮಾಚಿ ಅಕ್ರಮವಾಗಿ 67 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ ನಡೆಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು (ಡಿಆರ್ಐ) ಪತ್ತೆ ಹಚ್ಚಿದ್ದಾರೆ.
ಓದಿ: ಗ್ರೆನೆಡ್ನೊಂದಿಗೆ ಆಟವಾಡುತ್ತಿದ್ದ ವೇಳೆ ಸ್ಫೋಟ: ಪಾಕಿಸ್ತಾನದಲ್ಲಿ ಇಬ್ಬರು ಮಕ್ಕಳು ಸಾವು
ದುಬೈನಿಂದ ಮಂಗಳೂರಿಗೆ ನಿನ್ನೆ ಮಧ್ಯರಾತ್ರಿ 12.30ಕ್ಕೆ ಸ್ಪೈಸ್ ಜೆಟ್ ಎಸ್ಜಿ 146 ವಿಮಾನದಲ್ಲಿ ಆಗಮಿಸಿ, ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಭಟ್ಕಳ ಮೂಲದ ವ್ಯಕ್ತಿಯೋರ್ವನನ್ನು ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಈತ ಅಂಟುವ ಗುಳಿಗೆಯ ಒಳಗೆ ಚಿನ್ನವನ್ನು ಮರೆಮಾಚಿ ಅದನ್ನು ತನ್ನ ಗುಪ್ತಾಂಗದಲ್ಲಿರಿಸಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಟ್ಟು ಐದು ಗುಳಿಗೆಗಳ ಒಳಗೆ 809 ಗ್ರಾಂ ತೂಕದ (ಹೊರ ತೆಗೆದ ಬಳಿಕ 641.410 ಗ್ರಾಂ) ಚಿನ್ನ ಸಾಗಾಟ ಮಾಡುತ್ತಿದ್ದನಂತೆ.
ಇದೇ ವಿಮಾನದಲ್ಲಿ ಕಾಸರಗೋಡು ಮೂಲದ ವ್ಯಕ್ತಿಯು 646. 670 ಗ್ರಾಂ ಚಿನ್ನವನ್ನು ವಿಶೇಷ ಚೀಲ ಹೊಂದಿರುವ ಒಳ ಉಡುಪಿನಲ್ಲಿ ಮರೆ ಮಾಚಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.
ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ತೆಯಾಗಿರುವ ಚಿನ್ನ 999 ಪರಿಶುದ್ಧತೆ ಹೊಂದಿದೆ. ಬಂಧಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.