ಹಥ್ರಾಸ್ (ಉತ್ತರ ಪ್ರದೇಶ): ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ವಾರದ ಹಿಂದೆ ಹೀನ ಕೃತ್ಯಕ್ಕೆ ಸಾಕ್ಷಿಯಾಗಿದ್ದ ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯ ಬಲ್ಗರಿ ಗ್ರಾಮವೀಗ ಖಾಕಿ ಕೋಟೆಯಾಗಿದೆ.
ಪುಟ್ಟ ಗ್ರಾಮವನ್ನು 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸುತ್ತುವರೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಬಲ್ಗರಿ ಗ್ರಾಮದಿಂದ ಸುಮಾರು ಎರಡೂವರೆ ಕಿಲೋ ಮೀಟರ್ ದೂರದಲ್ಲೇ ಪ್ರವೇಶ-ನಿರ್ಗಮನ ಸ್ಥಳ ಗೊತ್ತು ಮಾಡಿರುವ ಪೊಲೀಸರು ಅಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ, ರಾತ್ರಿಯಿಡೀ ಕುಳಿತಿದ್ದಾರೆ. ಅತ್ಯಾಚಾರ ಸಂತ್ರಸ್ತೆ ನಿವಾಸಕ್ಕೆ ವಿಶೇಷ ತನಿಖಾ ತಂಡ (SIT) ಇಂದು ಬೆಳಗ್ಗೆಯೇ ಆಗಮಿಸಿದ್ದು, ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ.
ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು, ಬರ್ಬರವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
ಆದರೆ, ಅಲಿಗರ್ ಆಸ್ಪತ್ರೆ ನೀಡಿರುವ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹಥ್ರಾಸ್ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆದಿಲ್ಲ. ಆದರೆ ಗಾಯದ ಗುರುತುಗಳಿವೆ ಎಂದು ಹೇಳಲಾಗಿದೆ. ಹೀಗಾಗಿ ನಾವು FSL ವರದಿಗಾಗಿ ಕಾಯುತ್ತಿದ್ದೇವೆ ಎಂದು ಎಸ್ಪಿ ವಿಕ್ರಾಂತ್ ವೀರ್ ತಿಳಿಸಿದ್ದರು.
ಘಟನೆ ಖಂಡಿಸಿ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿ, 7 ದಿನದೊಳಗೆ ವರದಿ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದರು. ಪ್ರಕರಣದಲ್ಲಿ ಕೆಲವು ಅಧಿಕಾರಿಗಳು ವಿಳಂಬ ಹಾಗೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಯುಪಿ ಸರ್ಕಾರ ಎಸ್ಪಿ, ಡಿಎಸ್ಪಿ, ಇನ್ಸ್ಪೆಕ್ಟರ್ ಹಾಗೂ ಕೆಲ ಅಧಿಕಾರಿಗಳನ್ನ ಅಮಾನತು ಮಾಡಿತ್ತು. ಇದರ ಬೆನ್ನಲ್ಲೇ ಪ್ರಕರಣದ ತನಿಖೆಯ ಹೊಣೆಯನ್ನು ಎಸ್ಐಟಿಗೆ ವಹಿಸಿ ಸಿಎಂ ಆದೇಶ ಹೊರಡಿಸಿದ್ದಾರೆ.