ನವದೆಹಲಿ: ಎರಡು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಇಡಿ(ಜಾರಿ ನಿರ್ದೇಶನಾಲಯ) ಭಾನುವಾರ ದೆಹಲಿ-ಎನ್‌ಸಿಆರ್‌ನ ಅನೇಕ ಭಾಗಗಳಲ್ಲಿ ಶೋಧ ನಡೆಸಿದ್ದು, ನೋಯ್ಡಾ 'ಬೈಕ್ ಬೊಟ್' ಪೊಂಜಿ ಯೋಜನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಹಾಪುರದ ಆರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಲಖನೌ ವಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಡಿ ಜಂಟಿ ನಿರ್ದೇಶಕ (ಲಖನೌ ವಲಯ) ರಾಜೇಶ್ವರ ಸಿಂಗ್, ಬೈಕ್ ಬೊಟ್ ಪ್ರಕರಣ ಮತ್ತು ರಿಯಲ್ ಎಸ್ಟೇಟ್ ಪ್ರಮುಖ ಅಮ್ರಪಾಲಿ ಗ್ರೂಪ್ ವಿರುದ್ಧದ ಹಣ ವರ್ಗಾವಣೆ ಪ್ರಕರಣಗಳಲ್ಲಿ ಶೋಧ ಕಾರ್ಯ ನಡೆಸಿರುವುದನ್ನು ದೃಢಪಡಿಸಿದ್ದಾರೆ.
ಮೊದಲ ಪ್ರಕರಣದಲ್ಲಿ, ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದ್ದು. ಎಫ್ 7 ಬ್ರಾಡ್ಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ನಿರ್ದೇಶಕ ಮನೋಜ್ ತ್ಯಾಗಿ ಅವರನ್ನು ಅಕ್ರಮ ಹಣವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದೆ.