ಕರ್ನಾಟಕ

karnataka

ETV Bharat / jagte-raho

ಡ್ರಗ್ಸ್​ ಪ್ರಕರಣದ 14 ಮಂದಿ ಆರೋಪಿಗಳ ಪೈಕಿ 10 ಮಂದಿ ಪರಿಚಯವಿದೆ: ರಮೇಶ್ ದೆಂಬಲ್ - ಸ್ಯಾಂಡಲ್‌ವುಡ್ ಡ್ರಗ್ಸ್

ಡ್ರಗ್ಸ್ ಪ್ರಕರಣದ ಬಂಧಿತ ಆರೋಪಿಗಳ ಜತೆ ಒಡನಾಟ ಹೊಂದಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ರಮೇಶ್ ದೆಂಬಲ್‌ಗೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿದ ದೆಂಬಲ್, ರಾತ್ರಿ 9 ಗಂಟೆಯವರೆಗೂ ವಿಚಾರಣೆ ಎದುರಿಸಿದರು.

ramesh dembla
ರಮೇಶ್ ದೆಂಬಲ್

By

Published : Sep 27, 2020, 5:08 AM IST

Updated : Sep 27, 2020, 5:28 AM IST

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ವಸ್ತ್ರ ವಿನ್ಯಾಸಗಾರ ರಮೇಶ್ ದೆಂಬಲ್ ಅವರು ಸತತ 10 ಗಂಟೆಗಳ ಕಾಲ ಸಿಸಿಬಿಯ ವಿಚಾರಣೆಗೆ ಒಳಗಾದರು.

ಪ್ರಕರಣದ ಬಂಧಿತ ಆರೋಪಿಗಳ ಜತೆ ಒಡನಾಟ ಹೊಂದಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ರಮೇಶ್ ದೆಂಬಲ್‌ಗೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿದ ದೆಂಬಲ್, ರಾತ್ರಿ 9 ಗಂಟೆಯವರೆಗೂ ವಿಚಾರಣೆ ಎದುರಿಸಿದರು.

ಈ ವೇಳೆ ಬಂಧಿತ ಆರೋಪಿಗಳಿಗೂ ನಿಮಗೂ ಏನು ಸಂಬಂಧ? ಎಷ್ಟು ವರ್ಷಗಳಿಂದ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದೀರಾ? ಅವರೊಂದಿಗೆ ಯಾವೆಲ್ಲ ಪಾರ್ಟಿಗಳಿಗೆ ಹೋಗುತ್ತಿದ್ದೀರಿ? ಪಾರ್ಟಿಗಳಲ್ಲಿ ನಡೆಯುತ್ತಿದ್ದ ಸಂಗತಿಗಳೇನು? ಯಾರೆಲ್ಲ ಬರುತ್ತಿದ್ದರು... ಹೀಗೆ ಸುಮಾರು 80ಕ್ಕೂ ಅಧಿಕ ಪ್ರಶ್ನೆಗಳನ್ನು ಸಿಸಿಬಿ ತನಿಖಾಧಿಕಾರಿಗಳು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೀರೇನ್ ಖನ್ನಾ, ವೈಭವ್ ಜೈನ್ ಸಾಕಷ್ಟು ಪಾರ್ಟಿಗಳನ್ನು ಆಯೋಜಿಸುತ್ತಿದ್ದು, ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದೇನೆ. ಅಲ್ಲಿ ಡ್ರಗ್ಸ್ ವ್ಯವಹಾರದ ಬಗ್ಗೆ ಗೊತ್ತಿಲ್ಲ. ಫ್ಯಾಷನ್ ಸಂಬಂಧಿಸಿದ ಪಾರ್ಟಿಗಳಲ್ಲಿ ಸಿಕ್ಕಾಗ ಮಾತನಾಡಿದ್ದೇವೆ. ಫೋಟೋ ತೆಗೆಸಿಕೊಂಡಿದ್ದೇವೆ. ಅವರ ಖಾಸಗಿ ಜೀವನ ಶೈಲಿ ಬಗ್ಗೆ ಮಾಹಿತಿ ತಿಳಿದಿಲ್ಲ ಎಂದು ಹೇಳಿದ್ದಾರೆ ಎಂಬುದು ಮೂಲಗಳು ಉಲ್ಲೇಖ.

ವಿಚಾರಣೆ ಬಳಿಕ ಮಾತನಾಡಿದ ರಮೇಶ್ ದೆಂಬಲ್

ಫ್ಯಾಷನ್ ಡಿಸೈನರ್ ಸಂಸ್ಥೆ ಹೊಂದಿರುವ ರಮೇಶ್, ರಾಷ್ಟ್ರೀಯ ಮಟ್ಟದ ಫ್ಯಾಷನ್ ಡಿಸೈನರ್ ಎಂದು ಖ್ಯಾತಿಗಳಿಸಿದ್ದಾರೆ. ಹೀಗಾಗಿ ಅವರಿಗೆ ಸ್ಯಾಂಡಲ್‌ವುಡ್, ಬಾಲಿವುಡ್, ಮಾಲಿವುಡ್, ಕಾಲಿವುಡ್ ಸೇರಿ ಎಲ್ಲ ಸಿನಿ ಕ್ಷೇತ್ರದ ನಟ-ನಟಿಯರು, ಉದ್ಯಮಿಗಳು, ಕ್ರಿಕೆಟ್ ಆಟಗಾರರು ಮತ್ತು ರಾಜಕೀಯ ಮುಖಂಡರ ಮಕ್ಕಳ ಪರಿಚಯವಿದೆ.

ಅಲ್ಲದೆ, ಪ್ರಕರಣದಲ್ಲಿ ಬಂಧನಕ್ಕೊಳಗಾದ ನಟಿ ರಾಗಿಣಿ, ಸಂಜನಾ ಗಲ್ರಾನಿ, ಪೇಜ್-3 ಪಾರ್ಟಿಗಳ ಆಯೋಜಕ ವಿರೇನ್ ಖನ್ನಾ, ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಮತ್ತು ಕೇರಳ ಮೂಲದ ಫ್ಯಾಷನ್ ಡಿಸೈನರ್ ಹಾಗೂ ನಟ ನಿಯಾಜ್ ಸೇರಿ ಕೆಲವರ ಜತೆ ರಮೇಶ್ ಆತ್ಮೀಯತೆ ಹೊಂದಿದ್ದಾರೆ. ಹೀಗಾಗಿ ಸೆಲೆಬ್ರಿಟಿಗಳ ಪಾರ್ಟಿಗಳಲ್ಲಿ ರಮೇಶ್ ದೆಂಬಲ್ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯೆಲ್ಲಿ ನೋಟಿಸ್ ನೀಡಲಾಗಿತ್ತು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ವಿಚಾರಣೆ ಮುಗಿಸಿ ಹೊರಬಂದು ಮಾತನಾಡಿದ ರಮೇಶ್, ಪ್ರಕರಣದಲ್ಲಿ ಸಿಕ್ಕವರ ಪೈಕಿ ಬಹುತೇಕ ನನ್ನ ಸ್ನೇಹಿತರೆ ಇದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಪರಿಚಯ ಹೇಗೆ ? ಯಾವಗಿನಿಂದ ಪರಿಚಯವಾಗಿದೆ? ಒಡನಾಟ ಏನು... ಹೀಗೆ ನಾನಾ ಪ್ರಶ್ನೆಗಳನ್ನು ಕೇಳಿದ್ದಾರೆ. ವಿಚಾರಣೆಯ ಹೆಚ್ಚಿನ ಮಾಹಿತಿ ಹೇಳಲು ಸಾಧ್ಯವಿಲ್ಲ ಎಂದರು.

ಡ್ರಗ್ಸ್​ ಪ್ರಕರಣದ 14 ಮಂದಿಗಳ ಪೈಕಿ 10 ಮಂದಿ ಪರಿಚಯ ಇದ್ದಾರೆ. ನನ್ನ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿಲ್ಲ. ಫ್ಯಾಷನ್ ಪಾರ್ಟಿಗಳು ಹೊರತುಪಡಿಸಿ ಬೇರೆ ಯಾವುದೇ ಪಾರ್ಟಿಗಳಿಗೆ ನಾನು ಹೋಗಿಲ್ಲ. ಮತ್ತೊಮ್ಮೆ ಕರೆದರೆ ವಿಚಾರಣೆಗೆ ಹೋಗುತ್ತೇನೆ ಎಂದು ಹೇಳಿದರು.

Last Updated : Sep 27, 2020, 5:28 AM IST

ABOUT THE AUTHOR

...view details