ಬೆಂಗಳೂರು: ಕಾರು ಬಹುಮಾನ ಬಂದಿರುವುದಾಗಿ ಯುವಕನಿಗೆ ಕರೆ ಮಾಡಿ ಆಮಿಷವೊಡ್ಡಿದ ಸೈಬರ್ ಖದೀಮರು, 46 ಸಾವಿರ ರೂ. ಹಣ ಎಗರಿಸಿದ್ದಾರೆ.
ಕಾರು ಬಹುಮಾನ ಬಂದಿರುವುದಾಗಿ 46 ಸಾವಿರ ರೂ. ವಂಚಿಸಿದ ಸೈಬರ್ ಖದೀಮರು
ಬಹುಮಾನವಾಗಿ ಕಾರು ಗೆದ್ದಿದ್ದೀರ ಎಂದು ನಂಬಿಸಿ, ನೋಂದಣಿ ಶುಲ್ಕ, ಇನ್ಶೂರೆನ್ಸ್ ಎಂದೆಲ್ಲಾ ಕಥೆ ಕಟ್ಟಿ ಯುವಕನಿಂದ ಸೈಬರ್ ಖದೀಮರು, 46 ಸಾವಿರ ರೂ. ಹಣ ಎಗರಿಸಿದ್ದಾರೆ.
ಶಾಂತಿನಗರದಲ್ಲಿ ವಾಸವಾಗಿರುವ ಚಂದ್ರಶೇಖರ್ ಎಂಬವರಿಗೆ ಜುಲೈ 9 ರಂದು ಕರೆ ಮಾಡಿದ ವಂಚಕರು, ಬಹುಮಾನವಾಗಿ ಕಾರು ಗೆದ್ದಿದ್ದೀರ, 16.96 ಲಕ್ಷ ಬೆಲೆ ಬಾಳುವ ಮಹೀಂದ್ರ ಎಕ್ಸ್ ಯು.ವಿ.500 ಕಾರು ಇದಾಗಿದೆ. ಕಾರು ಪಡೆಯಲು ನೋಂದಣಿ ಶುಲ್ಕವಾಗಿ 8,500 ಪಾವತಿಸಬೇಕು ಎಂದು ಹೇಳಿದ್ದಾರೆ. ಕಾರು ಸಿಗುವ ಆಸೆಯಲ್ಲಿ ನೋಂದಣಿ ಶುಲ್ಕ ಪಾವತಿಸಿದ ಚಂದ್ರಶೇಖರ್ಗೆ ಮತ್ತೆ ಕರೆ ಮಾಡಿ ಇನ್ಶೂರೆನ್ಸ್‌ಗಾಗಿ 22 ಸಾವಿರ ರೂ. ಕಟ್ಟುವಂತೆ ಹೇಳಿದ್ದಾರೆ. ಇದಾದ ಕೆಲವು ದಿನಗಳ ಬಳಿಕ ಸಾರಿಗೆ ಶುಲ್ಕವಾಗಿ 15 ಸಾವಿರ ರೂ. ಪಾವತಿಸುವಂತೆ ಸೂಚಿಸಿದ್ದಾರೆ. ಮೋಸದ ಜಾಲ ಅರಿಯದ ಚಂದ್ರಶೇಖರ್ ವಂಚಕರ ಮಾತಿಗೆ ತಲೆ ಅಲ್ಲಾಡಿಸಿದ್ದಾರೆ.
ಆದರೆ ಹಣ ಪಾವತಿಸಿದರೂ ಕಾರು ನೀಡದಿರುವುದನ್ನು ಕಂಡು ಅನುಮಾನ ವ್ಯಕ್ತಪಡಿಸಿ ತಮಗೆ ಬಂದಿರುವ ಬಹುಮಾನದ ಕಾರು ಬೇಡವೆಂದು ವಂಚಕರಿಗೆ ಹೇಳಿದ್ದಾರೆ. ಹಾಗಾದರೆ ಕ್ಯಾನ್ಸಲ್ ಪ್ರೊಸೆಸ್ಗೆ 15, 225 ರೂ. ಕಟ್ಟಿ ಎಂದು ಹೇಳಿ ಪಾವತಿಸಿಕೊಂಡು ಆರೋಪಿಗಳು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ವಂಚನೆಗೊಳಗಾಗಿರುವುದನ್ನು ಅರಿತ ಚಂದ್ರಶೇಖರ್, ನಗರ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.