ಮುಂಬೈ:ಸುಲಿಗೆ ಪ್ರಕರಣ ಸಂಬಂಧ ಭೂಗತ ಪಾತಕಿ ಛೋಟಾ ರಾಜನ್ ಸೇರಿ ನಾಲ್ವರಿಗೆ ಮುಂಬೈ ಸೆಷನ್ಸ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಟ್ಟಡ ಗುತ್ತಿಗೆದಾರ ನಂದು ವಾಜೇಕರ್ ಎಂಬವರಿಗೆ ಬೆದರಿಕೆ ಹಾಕಿ, ಅವರಿಂದ 26 ಕೋಟಿ ರೂ. ಹಣ ಸುಲಿಗೆ ಮಾಡಿದ್ದ ಆರೋಪದಡಿ ಗ್ಯಾಂಗ್ಸ್ಟರ್ ಛೋಟಾ ರಾಜನ್ಗೆ ಜೈಲು ಶಿಕ್ಷೆ ನೀಡಲಾಗಿದೆ.
2015ರಲ್ಲಿ ನಂದು ವಾಜೇಕರ್ ಮಹಾರಾಷ್ಟ್ರದ ಪುಣೆಯಲ್ಲಿ ಜಮೀನೊಂದನ್ನು ಖರೀದಿಸಿದ್ದರು. ಇದಕ್ಕಾಗಿ ಪರಮಾನಂದ್ ಠಕ್ಕರ್ ಎಂಬ ಮಧ್ಯವರ್ತಿಗೆ 2 ಕೋಟಿ ರೂ. ಕಮಿಷನ್ ನೀಡಿದ್ದರು. ಆದರೆ ಠಕ್ಕರ್ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ್ದು, ಇದಕ್ಕೆ ವಾಜೇಕರ್ ಒಪ್ಪಲಿಲ್ಲ. ಹೀಗಾಗಿ ಠಕ್ಕರ್ ಛೋಟಾ ರಾಜನ್ನನ್ನು ಸಂಪರ್ಕಿಸಿದ್ದರು. ವಾಜೇಕರ್ ಕಚೇರಿಗೆ ತನ್ನ ಗ್ಯಾಂಗ್ ಕಳುಹಿಸಿದ್ದ ಛೋಟಾ ರಾಜನ್, 26 ಕೋಟಿ ರೂ. ನೀಡುವಂತೆ ಹಾಗೂ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿಸಿದ್ದ.
ಇದನ್ನೂ ಓದಿ: ಅಂಚೆ ಚೀಟಿಯಲ್ಲಿ ಭೂಗತ ಪಾತಕಿ ಛೋಟಾ ರಾಜನ್, ಮುನ್ನಾ ಬಜರಂಗಿ ಫೋಟೋ!
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ, ಛೋಟಾ ರಾಜನ್ ಹಾಗೂ ಆತನ ಸಹಚರರಾದ ಸುರೇಶ್ ಶಿಂಧೆ, ಲಕ್ಷ್ಮಣ್ ನಿಕಮ್, ಸುಮಿತ್ ವಿಜಯ್ ಮಾಟ್ರೆಗೆ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.