ಕರ್ನಾಟಕ

karnataka

ಕೃಷಿ ಮಂಡಳಿಯ ಕೋಟ್ಯಂತರ ರೂಪಾಯಿ ಗುಳುಂ ಪ್ರಕರಣ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ

By

Published : Feb 22, 2020, 10:04 PM IST

ರಾಜ್ಯ ಕೃಷಿ ಮಂಡಳಿ ಠೇವಣಿ ಇರಿಸಿದ್ದ ನೂರು ಕೋಟಿ ರೂಪಾಯಿ ಹಣದಲ್ಲಿ 48 ಕೋಟಿ ಗುಳುಂ ಮಾಡಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಗರದ 61ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ.

kn_bng_01_hc_Bail_Reject_7208962
ಕೃಷಿ ಮಂಡಳಿಯ ಕೋಟ್ಯಂತರ ರುಪಾಯಿ ಗುಳುಂ ಕೇಸ್: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸಿವಿಲ್ ಸೆಷನ್ ಕೋರ್ಟ್

ಬೆಂಗಳೂರು:ರಾಜ್ಯ ಕೃಷಿ ಮಂಡಳಿ ಠೇವಣಿ ಇರಿಸಿದ್ದ ನೂರು ಕೋಟಿ ರೂಪಾಯಿ ಹಣದಲ್ಲಿ 48 ಕೋಟಿ ಗುಳುಂ ಮಾಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

ನಿರೀಕ್ಷಣಾ ಜಾಮೀನು ಕೋರಿ ಪ್ರಕರಣದ ಪ್ರಮುಖ ಆರೋಪಿ ಹಾಗೂ ಬೆಂಗಳೂರಿನ ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಮಂಜುನಾಥ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ವಿದ್ಯಾಧರ್ ಶಿರಹಟ್ಟಿ ವಿಚಾರಣೆ ನಡೆಸಿದರು. ಈ ವೇಳೆ ಸರ್ಕಾರದ ಪರ ಅಭಿಯೋಜಕಿ ಶೈಲಜಾ ಕೃಷ್ಣ ನಾಯಕ್ ವಾದಿಸಿ, ಪ್ರಕರಣ ಅತ್ಯಂತ ಗಂಭೀರ ಸ್ವರೂಪದ ಆರ್ಥಿಕ ಅಪರಾಧವಾಗಿದೆ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಸಂಘಟಿತ ಆರ್ಥಿಕ ಅಪರಾಧ ನಡೆಸಿರುವುದು ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕಿರುವ ಪ್ರಮುಖ ಆರೋಪಿ ಮತ್ತು ಬ್ಯಾಂಕ್ ಮ್ಯಾನೇಜರ್ ಮಂಜುನಾಥ್ ತಲೆಮರೆಸಿಕೊಂಡಿದ್ದಾರೆ. ಈ ಹಂತದಲ್ಲಿ ಇವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ತನಿಖೆಗೆ ಸಮಸ್ಯೆ ಎದುರಾಗಲಿದೆ. ಹೀಗಾಗಿ ಮನವಿ ಪರಿಗಣಿಸಬಾರದು ಎಂದು ಕೋರಿದರು. ಸರ್ಕಾರದ ಪರ ಅಭಿಯೋಜಕರ ವಾದ ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಸೇರಿದ್ದ 100 ಕೋಟಿ ರೂಪಾಯಿ ಹಣವನ್ನು ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಹೆಚ್ಚು ಬಡ್ಡಿ ನೀಡುವುದಾಗಿ ತಿಳಿಸಿ ನಿಶ್ಚಿತ ಠೇವಣಿ ಇರಿಸಿಕೊಂಡಿತ್ತು. ಅದರಂತೆ ಮಂಡಳಿ 2019ರ ನವೆಂಬರ್ 18ರಂದು ರಾಜಾಜಿನಗರದ ಆಂಧ್ರ ಬ್ಯಾಂಕ್ ಶಾಖೆಯಲ್ಲಿ ಇರಿಸಿದ್ದ ತನ್ನ 100 ಕೋಟಿ ರೂಪಾಯಿ ಆವರ್ತ ನಿಧಿಯನ್ನು ಸಿಂಡಿಕೇಟ್ ಬ್ಯಾಂಕ್​​ನಲ್ಲಿ ನಿಶ್ಚಿತ ಠೇವಣಿ ಇರಿಸಲು ಆರ್​ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿತ್ತು. ಈ ವೇಳೆ 50 ಕೋಟಿ ಮೊತ್ತದ ಎರಡು ಬಾಂಡ್ ಮಾಡಿರುವುದಾಗಿ ತಿಳಿಸಿದ್ದ ಬ್ಯಾಂಕ್ ಸಿಬ್ಬಂದಿ, ಮಂಡಳಿಯ ಕೆಲ ಅಧಿಕಾರಿಗಳ ಜತೆ ಸೇರಿ ಹಣ ಲಪಟಾಯಿಸಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

ಅದರಂತೆ ಮಹಮ್ಮದ್ ಮುಸ್ತಾಫ ಎಂಬ ನಕಲಿ ವ್ಯಕ್ತಿಯನ್ನು ಮಂಡಳಿಯ ಫೈನಾನ್ಸ್ ಆಫೀಸರ್ ಎಂದು ಬಿಂಬಿಸಿ, ಆತನ ಹೆಸರಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಹಣವನ್ನು ಆತನ ಖಾತೆ ಮೂಲಕ ಲಪಟಾಯಿಸಿದ್ದರು. ಮಂಡಳಿ ಇರಿಸಿದ್ದ ನೂರು ಕೋಟಿ ರೂಪಾಯಿ ಹಣದಲ್ಲಿ 48 ಕೋಟಿ ರೂಪಾಯಿಗಳನ್ನು ಚನ್ನೈ ಸೇರಿದಂತೆ ದೇಶದ ವಿವಿಧೆಡೆಯ ಚಾಲ್ತಿ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ವಂಚನೆ ಎಸಗಿದ್ದರು ಎನ್ನುವ ಆರೋಪವಿದೆ. ಈ ಕುರಿತು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಕಳೆದ ಜನವರಿ 22ರಂದು ನಗರದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ನಗರ ಪೊಲೀಸ್ ಆಯುಕ್ತರು ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಅದರಂತೆ ತನಿಖೆ ಆರಂಭಿಸಿದ ಸಿಸಿಬಿ ಹಲವು ಆರೋಪಿಗಳನ್ನು ಬಂಧಿಸಿದೆ. ಆದರೆ ಬ್ಯಾಂಕ್ ಮ್ಯಾನೇಜರ್ ಮಂಜುನಾಥ್ ತಲೆಮರೆಸಿಕೊಂಡಿದ್ದಾನೆ.

For All Latest Updates

ABOUT THE AUTHOR

...view details