ಚಿಕ್ಕಮಗಳೂರು : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವಯೋವೃದ್ದೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಲೆ ಅಡಿಕೆ ಕೇಳುವ ನೆಪದಲ್ಲಿ ಬಂದು ಅಜ್ಜಿಯ ದರೋಡೆ ಮಾಡಿದ್ದ ಖದೀಮನ ಬಂಧನ - chikkamagalore police arrested thief
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವಯೋವೃದ್ದೆಯ ಬಳಿ ಎಲೆ, ಅಡಿಕೆ ಕೇಳುವ ನೆಪದಲ್ಲಿ ಬಂದ ಖದೀಮ ಆಕೆಯ ಕಣ್ಣಿಗೆ ಕಾರದ ಪುಡಿ ಎರಚಿ ಸುಮಾರು 1 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೋಲಿಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರದ ಬಳಿ ಜಯಮ್ಮ(70) ಎಂಬ ಮಹಿಳೆ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಳು. ಇದನ್ನು ನೋಡಿದ ಆರೋಪಿ ಭೂತನಹಳ್ಳಿಯ ಗೋವಿಂದ ಆಕೆಯ ಬಳಿ ಹೋಗಿ ಎಲೆ, ಅಡಿಕೆ ಬೇಕು ಎಂದೂ ಕೇಳಿದ್ದಾನೆ. ಈ ವೇಳೆ ಆಕೆಯ ಕಣ್ಣಿಗೆ ಕಾರದ ಪುಡಿ ಎರಚಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ.
ಈ ಕುರಿತು ಜಯಮ್ಮ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಆರೋಪಿ ಗೋವಿಂದನನ್ನು ಅಜ್ಜಂಪುರದ ಬೇಗೂರು ಹಳ್ಳದ ಬಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಚಿನ್ನದ ಸರ ಹಾಗೂ ಒಂದು ಬೈಕ್ ವಶ ಪಡಿಸಿಕೊಂಡಿದ್ದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.