ಬೆಂಗಳೂರು: ಗೆಳೆಯನ ಅಕ್ಕನನ್ನೇ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಕುಖ್ಯಾತ ಮನೆಗಳ್ಳನನ್ನ ಆತನ ಸ್ನೇಹಿತರೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ಕಾರ್ತಿಕ್ ಆಲಿಯಾಸ್ ಎಸ್ಕೇಪ್ ಕಾರ್ತಿಕ್ ನೀಡಿದ ದೂರಿನ ಮೇರೆಗೆ ಯುವತಿಯ ಸಹೋದರ ರಾಜ್ ಕುಮಾರ್, ಸಹಚರರಾದ ಅಭಿಷೇಕ್, ಗೌತಮ್ ಹಾಗೂ ಪ್ರಶಾಂತ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೊತ್ತನೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾರ್ತಿಕ್ ವಿರುದ್ಧ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದಿದ್ದ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಕಳೆದ ಐದು ವರ್ಷಗಳ ಹಿಂದೆ ಹೆಣ್ಣೂರಿನಲ್ಲಿ ಕಾರ್ತಿಕ್ಗೆ ರಾಜ್ ಕುಮಾರ್ ಪರಿಚಯವಾಗಿತ್ತು. ಆಗಾಗ ಮನೆಗೆ ಹೋಗಿ ಬರುತ್ತಿದ್ದ. ಈ ವೇಳೆ ಸ್ನೇಹಿತ ರಾಜ್ ಕುಮಾರ್ನ ಅಕ್ಕನ ಪರಿಚಯವಾಗಿ ಆತ್ಮೀಯತೆ ಬೆಳೆದಿದೆ. ಕಾಲಕ್ರಮೇಣ ಇಬ್ಬರು ಪ್ರೀತಿಸಿದ್ದಾರೆ. ಈ ವಿಚಾರ ರಾಜ್ ಕುಮಾರ್ಗೆ ಗೊತ್ತಾಗಿ ಅಕ್ಕನಿಂದ ದೂರ ಇರುವಂತೆ ಕಾರ್ತಿಕ್ಗೆ ಎಚ್ಚರಿಸಿದ್ದಾನೆ. ಇದಕ್ಕೆ ಕ್ಯಾರೆ ಅನ್ನದ ಕಾರ್ತಿಕ್ ರಾಜ್ ಕುಮಾರ್ ಕಣ್ತಪ್ಪಿಸಿ ಆಗಾಗ ಭೇಟಿ ಮಾಡುತ್ತಿದ್ದ. ಇದರಿಂದ ಅಸಮಾಧಾನಗೊಂಡ ಕಾರ್ತಿಕ್ಗೆ ಬುದ್ದಿ ಕಲಿಸಲು ರಾಜ್ ಕುಮಾರ್ ತೀರ್ಮಾನಿಸಿದ್ದ.