ಅಥಣಿ: ಕಳೆದ 5ನೇ ತಾರೀಖಿನಂದು ಕೃಷ್ಣಾ ನದಿಯಲ್ಲಿ ತೇಲಿಬಂದ ಶವದ ಜೊತೆಗೆ 1.5 ಕೆಜಿ ಬಂಗಾರ ಪತ್ತೆಯಾದ ಪ್ರಕರಣವನ್ನು ಅಥಣಿ ಪೊಲೀಸರು ಭೇದಿಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನದಿಯಲ್ಲಿ ತೇಲಿಬಂದ ಮೃತ ದೇಹ ತಾಲೂಕಿನ ಅವರಖೋಡ ಗ್ರಾಮದ ದಡದಲ್ಲಿ ಸಿಲುಕಿರುವದನ್ನು ಗ್ರಾಮಸ್ಥರು ಗಮನಿಸಿ ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಿಶೀಲನೆ ನಡೆಸಿದಾಗ ಪಕ್ಕದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಮಿರಜ್ ತಾಲೂಕಿನ ಪಾಟಗಾಂವ ಗ್ರಾಮದ ಸಾಗರ ಪಾಟೀಲ್ (30) ಎಂದು ಗುರುತಿಸಲಾಗಿತ್ತು.
ಪ್ರಕರಣದ ಜಾಡು ಹಿಡಿದ ಅಥಣಿ ಪೊಲೀಸರು ಜಂಬಗಿ ಗ್ರಾಮದ ನವನಾಥ, ಬಾಪು ಸಾಹೇಬ್, ಬಾಬರ ಎಂಬ ಆರೋಪಿಯನ್ನು ಬಂಧಿಸಿ 3.6 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡು ಮತ್ತೋರ್ವ ಆರೋಪಿಗೆ ಬಲೆ ಬೀಸಿದ್ದಾರೆ.
ಘಟನೆ ಹಿನ್ನೆಲೆ:ಮೃತ ಸಾಗರ ಪಾಟೀಲ್ ಉತ್ತರ ಪ್ರದೇಶ ಜಾಂದೌಲಿ ಜಿಲ್ಲೆಯ ಮುಗಲ ಸರಾಯಿ ಎಂಬ ಗ್ರಾಮದಲ್ಲಿ ಚಿನ್ನ ಕರಗಿಸುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಮರಳಿ ಮಹಾರಾಷ್ಟ್ರದ ಸ್ವಗ್ರಾಮಕ್ಕೆ ಬರುವಾಗ ದಾರಿ ಮಧ್ಯ ಆರೋಪಿಯಾಗಿರುವ ನವನಾಥ ಹಾಗೂ ಅವನ ಸ್ನೇಹಿತ ಜೊತೆಯಾಗಿ ಸಾಗರ ಪಾಟೀಲ್ನನ್ನು ಕೊಲೆ ಮಾಡಿ ಕೈಯಲ್ಲಿ ಇದ್ದ ಬ್ಯಾಗನ್ನು ತೆಗೆದುಕೊಂಡು ಶವವನ್ನು ಕೃಷ್ಣಾ ನದಿಯಲ್ಲಿ ಹಾಕಿರುತ್ತಾರೆ. ಮೃತ ಸಾಗರ ಪಾಟೀಲ್ ಚಿನ್ನವನ್ನು ಬ್ಯಾಗಿನಲ್ಲಿ ಇಡದೇ ತಮ್ಮ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡಿರುತ್ತಾರೆ. ಆರೋಪಿ ನವನಾಥ ಬ್ಯಾಗಿನಲ್ಲಿ ಚಿನ್ನ ಇದೆ ಎಂದು ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಿರುತ್ತಾರೆ.
ಸದ್ಯ ಜಿಲ್ಲೆಯಲ್ಲಿ ಭಾರಿ ಚರ್ಚೆ ಜೊತೆಗೆ ಕುತೂಹಲ ಮೂಡಿಸಿತ್ತು. ನದಿಯಲ್ಲಿ ತೇಲಿ ಬಂದ ಬಂಗಾರ ಪ್ರಕರಣಕ್ಕೆ ಅಥಣಿ ಡಿವೈಎಸ್ಪಿ ಎಸ್ವಿ ಗಿರೀಶ್ ನೇತೃತ್ವದಲ್ಲಿ ಪಿಎಸ್ಐ ಕುಮಾರ್ ಹಾಡಕಾರ ಮತ್ತು ಸಿಬ್ಬಂದಿ ವರ್ಗ ಪ್ರಕರಣ ಭೇದಿಸಿ ಇನ್ನೋರ್ವ ಆರೋಪಿಗೆ ಬಲೆ ಬಿಸಿ ತನಿಖೆ ಮುಂದುವರಿಸಿದ್ದಾರೆ.