ಉಳ್ಳಾಲ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದ ಮದರಸ ಧಾರ್ಮಿಕ ಮುಖಂಡನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಲಾಗಿದೆ ಎಂಬ ಆಪಾದನೆ ಕೇಳಿಬಂದಿದೆ.
ಅಸೈಗೋಳಿ ನಿವಾಸಿ ಹನೀಫ್ ನಿಜಾಮಿ (40) ಹಲ್ಲೆಗೊಳಗಾದವರು. ಕಾಂಗ್ರೆಸ್ ಕಾರ್ಯಕರ್ತ ಕರೀಂ ನೇತೃತ್ವದ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಹನೀಫ್ ನಿಜಾಮಿ ಉಪ್ಪಳ, ಮಂಜೇಶ್ವರ, ಪೈವಳಿಕೆ ಹಾಗೂ ಮಂಜನಾಡಿ ಭಾಗಗಳಲ್ಲಿ ಗ್ರಾ.ಪಂ. ಚುನಾವಣೆ ಹಿನ್ನೆಲೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರಗಳನ್ನು ಹಂಚಿಕೊಂಡಿದ್ದರು.
ಮಂಜನಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗುತ್ತಿದ್ದರು. ಈ ಬಾರಿ ನಾಲ್ವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅವರ ಪರ ಪ್ರಚಾರ ಕಾರ್ಯದಲ್ಲಿ ನಿಜಾಮಿ ಭಾಗವಹಿಸಿದ್ದರು. ಇದೇ ದ್ವೇಷದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊಲೆಗೆ ಯತ್ನಿಸಿರುವುದಾಗಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡ ಫಝಲ್ ಅಸೈಗೋಳಿ ಆರೋಪಿಸಿದ್ದಾರೆ.
ಹಳೇ ದ್ವೇಷ: ಬೆಂಗಳೂರಲ್ಲಿ ರೌಡಿಶೀಟರ್ ಬರ್ಬರ ಹತ್ಯೆ
ಕೆಲ ವರ್ಷಗಳ ಹಿಂದೆ ಬಿಜೆಪಿ ಅಲ್ಪಸಂಖ್ಯಾತ ಘಟಕದ ಬ್ಯಾನರ್ನಡಿ ಹನೀಫ್ ನಿಜಾಮಿ ಅವರು ಧಾರ್ಮಿಕ ಮುಖಂಡರ ಸಭೆ ನಡೆಸಿದ್ದರು. ಆಗ ಸರ್ಕಾರಿ ಸವಲತ್ತುಗಳನ್ನು ದೊರಕಿಸಿ ಕೊಡುವ ಕುರಿತು ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಆಕ್ರೋಶಿತ ಮುಖಂಡರು ಅಡ್ಕರೆಪಡ್ಪು ಮದರಸದ ಕೆಲಸದಿಂದ ವಜಾಗೊಳಿಸಿದ್ದರು. ಆ ನಂತರ ನಿಜಾಮಿ ಅವರು ಪುತ್ತೂರು ಭಾಗಗಳಲ್ಲಿ ಧಾರ್ಮಿಕ ಮುಖಂಡರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.