ಬಂಟ್ವಾಳ: ಹಾರ್ಡ್ವೇರ್ ಅಂಗಡಿಯೊಂದರಲ್ಲಿ ನಗದು ಕಳವು ಮಾಡಿ ಪರಾರಿ ಆಗುತ್ತಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ.
ವಿಟ್ಲ ಕಸಬಾ ಗ್ರಾಮದ ಮಾರ್ನಮಿಗುಡ್ಡೆಯಲ್ಲಿನ ಹಾರ್ಡ್ವೇರ್ ಅಂಗಡಿಯಲ್ಲಿ ಕಳ್ಳತನ ಎಸಗಿದ್ದ ಆರೋಪಿಯನ್ನು ಘಟನೆ ನಡೆದ ಕೆಲ ಹೊತ್ತಿನಲ್ಲೇ ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಂಗಳೂರು ಬಜ್ಪೆ ಕೊಂಚಾರು ನಿವಾಸಿ ಮಹಮ್ಮದ್ ರಫೀಕ್ ಬಂಧಿತ ಆರೋಪಿ. ಮಾರ್ನಮಿಗುಡ್ಡೆ ಚರ್ಚ ಬಳಿಯ ರಾಕೇಶ್ ಶೆಟ್ಟಿ ಅವರ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ದ್ವಿಚಕ್ರದಲ್ಲಿ ಬಂದ ಅಪರಿಚಿತ ವ್ಯಕ್ತಿ ಅಂಗಡಿಯ ಗಲ್ಲಾಪೆಟ್ಟಿಗೆಯಲ್ಲಿದ್ದ 17,000 ರೂ. ಕದ್ದು ಹೊಯ್ದಿದ್ದಾಗಿ ದೂರು ನೀಡಲಾಗಿತ್ತು.
ಅಂಗಡಿ ಮಾಲಕ ಬರುತ್ತಿದ್ದಂತೆ ತನ್ನ ವಾಹನದಲ್ಲಿ ಆರೋಪಿ ಪರಾರಿ ಆಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ತಾನು ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.