ಬೆಂಗಳೂರು: ನಗರವನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಯಿ ನಿರ್ಮಲಾರನ್ನು ಕೊಂದು ಪರಾರಿಯಾಗಿದ್ದ ಆರೋಪಿ ಅಮೃತಳನ್ನು ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಆಕೆಯ ಪ್ರಿಯಕರನೊಂದಿಗೆ ಬಂಧಿಸಿ ಪೊಲೀಸರು ನಗರಕ್ಕೆ ಕರೆತಂದಿದ್ದಾರೆ. ಕೊಲೆ ನಡೆದ ಸ್ಥಳವನ್ನು ಇಂದು ಮಹಜರು ನಡೆಸಿದರು.
ಅಂದು ತನ್ನ ತಾಯಿಯನ್ನು ಕೊಲೆಗೈಯಲು ಏನೆಲ್ಲಾ ಉಪಾಯ ಮಾಡಲಾಗಿತ್ತು ಎಂಬುದರ ಕುರಿತು ಅಮೃತ ಸಂಪೂರ್ಣವಾಗಿ ಪೊಲೀಸರಿಗೆ ವಿವರಿಸಿದಳು. ಕೆ.ಆರ್. ಪುರಂನ ಅಕ್ಷಯನಗರದಲ್ಲಿ ನಿರ್ಮಲಾ ಅವರು ವಾಸವಿದ್ದರು.ಮನೆಯ ಹಾಲ್ನಲ್ಲಿ ಚಾಪೆ ಮೇಲೆ ತಾಯಿ ನಿರ್ಮಲಾ ಮತ್ತು ತಾನು ದಿವಾನ್ ಮೇಲೆ ಮಲಗಿದ್ದೆವು. ನನ್ನ ತಮ್ಮ ಹರೀಶ್ ಬೆಡ್ರೂಮ್ನಲ್ಲಿ ಮಲಗಿದ್ದ. ಈ ವೇಳೆ ಮಲಗಿದ್ದ ತಾಯಿಯನ್ನು ತಲೆದಿಂಬಿನಿಂದ ಕೊಂದಿದ್ದೆ. ನಂತರ ಗಂಟಲು ಮತ್ತು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದೆ. ಕೊಂದ ಬಳಿಕ ಬೆಡ್ ರೂಮ್ಗೆ ಹೋಗಿ ತಮ್ಮ ಹರೀಶ್ನಿಗೂ ಇರಿದಿದ್ದೆ. ಆತ ನನ್ನ ಎರಡೂ ಕೈಗಳನ್ನು ಹಿಡಿದುಕೊಂಡ. ಪರಿಣಾಮ ಭಯದಿಂದ ಆತನಿಂದ ಕೈ ಬಿಡಿಸಿಕೊಂಡು ಚಾಕುವನ್ನು ಅಲ್ಲೆ ಬಿಟ್ಟು ಓಡಿಹೋಗಿದ್ದೆ ಎಂದು ಕೃತ್ಯವನ್ನು ಬಾಯ್ಬಿಟ್ಟಿದ್ದಾಳೆ ಆರೋಪಿ. ಚಾಕು ಇರಿತದಿಂದ ಸಹೋದರ ಹರೀಶ್ ತೀವ್ರವಾಗಿ ಗಾಯಗೊಂಡಿದ್ದಾನೆ.
ಇದನ್ನೂ ಓದಿ...ಸಾಲದ ವಿಚಾರ: ತಾಯಿಗೆ ಚಾಕು ಇರಿದ ಮಗಳು... ತಮ್ಮನನ್ನೂ ಬಿಡಲ್ಲ ಅಂದಳು! ಕಾರಣ?