ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ರಚಿಸಲ್ಪಟ್ಟಿದ್ದ ಏಮ್ಸ್‌ನ ವಿಧಿ ವಿಜ್ಞಾನ ವೈದ್ಯಕೀಯ ಮಂಡಳಿ ಇದೀಗ ಸುಶಾಂತ್ರದ್ದು ಆತ್ಮಹತ್ಯೆ ಎಂದು ವರದಿ ನೀಡಿದೆ.
ನಾವು ನಮ್ಮ ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ಸುಶಾಂತ್ ಸಿಂಗ್ರನ್ನು ಕತ್ತು ಹಿಸುಕಿ ಅಥವಾ ವಿಷಪ್ರಾಶನ ಮಾಡಿ ಕೊಲೆ ಮಾಡಲಾಗಿಲ್ಲ. ನೇಣು ಬಿಗಿದ ಕುತ್ತಿಗೆಯ ಜಾಗ ಬಿಟ್ಟು ಸುಶಾಂತ್ ಮೃತದೇಹದ ಬೇರಾವುದೇ ಅಂಗಾಂಗಗಳ ಮೇಲೆ ಗಾಯದ ಗುರುತುಗಳಿಲ್ಲ. ಅವರು ನೇಣಿಗೆ ಶರಣಾಗಿಯೇ ಮೃತಪಟ್ಟಿದ್ದು, ಇದು ಆತ್ಮಹತ್ಯೆ ಎಂದು ಏಮ್ಸ್‌ನ ವಿಧಿ ವಿಜ್ಞಾನ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ. ಸುಧೀರ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಸುಶಾಂತ್ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂಬ ದೂರಿನಡಿ ನಟನ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಾವಿಗೂ ಮುನ್ನ ಸುಶಾಂತ್ಗೆ ವಿಷಪ್ರಾಶನ ಮಾಡಲಾಗಿದೆ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ, ಉದ್ದೇಶಪೂರ್ವಕವಾಗಿಯೇ ಮರಣೋತ್ತರ ಪರೀಕ್ಷೆ ವಿಳಂಬ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ, ತನಿಖೆಗೆ ಸಹಾಯಕವಾಗಲೆಂದು ಸಿಬಿಐ ದೆಹಲಿಯ ಏಮ್ಸ್ ಆಸ್ಪತ್ರೆ ಸಂಪರ್ಕಿಸಿತ್ತು.
ಸುಶಾಂತ್ರ ಮರಣೋತ್ತರ ಪರೀಕ್ಷೆ ವರದಿಗಳನ್ನು ಮರು ಪರಿಶೀಲಿಸಲು ವಿಧಿ ವಿಜ್ಞಾನ ತಜ್ಞರ ತಂಡವನ್ನು ಏಮ್ಸ್‌ನ ವೈದ್ಯಕೀಯ ಮಂಡಳಿ ರಚಿಸಿತ್ತು. ಮೊನ್ನೆಯಷ್ಟೇ ಮುಂಬೈನ ಕಲಿನಾ ವಿಧಿ ವಿಜ್ಞಾನ ಪ್ರಯೋಗಾಲಯವು ಸಾಯುವ ಮುನ್ನ ಸುಶಾಂತ್ಗೆ ವಿಷಪ್ರಾಶನವಾಗಿದೆ ಎಂಬ ಮಾಹಿತಿ ತಳ್ಳಿಹಾಕಿ ವರದಿ ನೀಡಿತ್ತು.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ಕರುಳಿನಲ್ಲಿ ಉಳಿದಿದ್ದ ಆಹಾರ (ವೆಸರಾ) ಪದಾರ್ಥದ ಮಾದರಿಯಲ್ಲಿ ಶೇ. 20ರಷ್ಟು ಮಾತ್ರ ತೆಗೆದಿಡಲಾಗಿತ್ತು. ಇದನ್ನು ಪರೀಕ್ಷೆಗೆ ಒಳಪಡಿಸಿದಾಗ ವಿಷ ಪ್ರಾಶನವಾಗಿಲ್ಲ ಎಂದು ವರದಿಗಳು ಹೇಳಿದೆ. ಆದರೆ, ಕರಳಿನಲ್ಲಿದ್ದ ಆಹಾರದ ಮಾದರಿ ಹೆಚ್ಚಿಗೆ ಸಂಗ್ರಹವಾಗದ ಕಾರಣ ಫಲಿತಾಂಶ ನಿಖರವಾಗಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.