ಮುಂಬೈ:ಮದುವೆಯಾಗಲು ನಿರಾಕರಿಸಿದ್ದಕ್ಕೆ 'ಉಡಾನ್' ಟೆಲಿವಿಷನ್ ಶೋ ಖ್ಯಾತಿಯ ನಟಿ ಮಾಲ್ವಿ ಮಲ್ಹೋತ್ರಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ನಟಿಯ ಫೇಸ್‌ಬುಕ್ ಗೆಳೆಯ, ಆರೋಪಿ ಕುಮಾರ್ ಮಹಿಪಾಲ್ ಸಿಂಗ್ನನ್ನು ಮುಂಬೈನ ವರ್ಸೋವಾ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 26ರ ರಾತ್ರಿ ಮುಂಬೈನ ವರ್ಸೋವಾದ ಕೃಷಿ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ರಸ್ತೆಯಲ್ಲಿ ಮಾಲ್ವಿ ಮಲ್ಹೋತ್ರಾಗೆ ಮಹಿಪಾಲ್ ಸಿಂಗ್ ಚೂರಿ ಇರಿದಿದ್ದ. ಕೃತ್ಯ ಎಸಗಿ ಪರಾರಿಯಾಗುವ ವೇಳೆ ಮುಂಬೈ - ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈತನ ಕಾರು ಅಪಘಾತಕ್ಕೀಡಾಗಿತ್ತು. ಸಣ್ಣಪುಟ್ಟ ಗಾಯಗಳಾದ ಸಿಂಗ್ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ.
ಆರೋಪಿ ಕುಮಾರ್ ಮಹಿಪಾಲ್ ಸಿಂಗ್ ಆರೋಪಿಗಾಗಿ ಬಲೆ ಬೀಸಿದ್ದ ವರ್ಸೋವಾ ಪೊಲೀಸರು, ಮೊಬೈಲ್ ಟ್ರ್ಯಾಕ್ ಮಾಡಿ ಸಿಂಗ್ ಇರುವ ಸ್ಥಳದ ಮಾಹಿತಿ ಪಡೆದಿದ್ದಾರೆ. ಆತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನವೆಂಬರ್ 2ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಕಂಗನಾ ರನೌತ್, "ಡಿಯರ್ ಮಾಲ್ವಿ.. ನಾನು ನಿನ್ನೊಂದಿಗಿದ್ದೇನೆ. ನಿನ್ನ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದಿದೆ. ಆದಷ್ಟು ಬೇಗ ಗುಣಮುಖಳಾಗುವಂತೆ ಪ್ರಾರ್ಥಿಸಿಕೊಳ್ಳುತ್ತೇನೆ. ಅಪರಾಧಿಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಜೀ ಅವರ ಬಳಿ ಮನವಿ ಮಾಡುತ್ತೇನೆ. ನಿನ್ನೊಂದಿಗೆ ನಾವೆಲ್ಲರಿದ್ದೇವೆ, ನ್ಯಾಯ ಒದಗಿಸಿಕೊಡುತ್ತೇವೆ, ನಂಬಿಕೆಯಿರಲಿ"
ಮಾಲ್ವಿ ಮಲ್ಹೋತ್ರಾ ಪ್ರಸಿದ್ಧ ಟೆಲಿವಿಷನ್ ಶೋ 'ಉಡಾನ್' ಹಾಗೂ 'ಹೋಟೆಲ್ ಮಿಲನ್' ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ನಿರ್ಮಾಪಕ ಎಂದು ಹೇಳಲಾಗಿರುವ ಕುಮಾರ್ ಮಹಿಪಾಲ್ ಸಿಂಗ್, 2019ರಿಂದ ಮಾಲ್ವಿ ಜೊತೆ ಫೇಸ್ಬುಕ್ನಲ್ಲಿ ಪರಿಚಯವಿದ್ದಾನೆ. ಇವರಿಬ್ಬರು ಕೆಲ ಬಾರಿ ಭೇಟಿಯಾಗಿದ್ದಾರೆ ಎಂದು ಕೂಡ ಹೇಳಲಾಗಿದೆ.