ಬಳ್ಳಾರಿ:ಜಾತಿ ನಿಂದಿಸಿ ಸಾವಿಗೆ ಪ್ರಚೋದನೆ ನೀಡಿರುವ ಆರೋಪ ಕೇಳಿಬಂದಿದ್ದು, ಮನನೊಂದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮದಲ್ಲಿ ನಡೆದಿದೆ.
ಕಾಕುಬಾಳು ಗ್ರಾಮದ ನಿವಾಸಿ ಯರ್ರಿಸ್ವಾಮಿ (24) ಆತ್ಮಹತ್ಯೆಗೆ ಶರಣಾದ ಯುವಕ. ತನ್ನ ಮನೆಯ ಎದುರೇ ಯರ್ರಿಸ್ವಾಮಿ ವಿಷ ಸೇವಿಸಿದ್ದು, ಹೊಸಪೇಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ.
ಘಟನೆ ಹಿನ್ನೆಲೆ:
ಕೆಲ ದಿನಗಳ ಹಿಂದಷ್ಟೇ ಯರ್ರಿಸ್ವಾಮಿ ಅದೇ ಗ್ರಾಮದ ಅಪ್ರಾಪ್ತೆಯನ್ನು ಮದುವೆ ಮಾಡಿಕೊಂಡಿದ್ದ. ಹೀಗಾಗಿ ಆತನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಗಾದಿಗನೂರು ಠಾಣಾ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಯರ್ರಿಸ್ವಾಮಿ ಹೊರ ಬಂದಿದ್ದನು. ಪತ್ನಿಯ ಕುಟುಂಬಸ್ಥರು ಯರ್ರಿಸ್ವಾಮಿಯನ್ನು ಕೀಳು ಜಾತಿಯವ ಎಂದು ನಿಂದಿಸುತ್ತಿದ್ದರು. ಇದರಿಂದ ಮನನೊಂದ ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮಗನ ಸಾವಿಗೆ ಶಂಕರ, ಹನುಮಂತಪ್ಪ, ಚನ್ನಮ್ಮ ಎಂಬುವವರು ಪ್ರಚೋದನೆ ನೀಡಿದ್ದು, ಇವರ ವಿರುದ್ಧ ಯರ್ರಿಸ್ವಾಮಿಯ ತಂದೆ ಪ್ರಕರಣ ದಾಖಲಿಸಿದ್ದಾರೆ.