ಬೆಂಗಳೂರು: ಆನ್‌ಲೈನ್ ಮೂಲಕ ಫಾಸ್ಟ್ಟ್ಯಾಗ್ ರಿಚಾರ್ಜ್ ಮಾಡಿಕೊಳ್ಳಲು ಹೋದವರಿಗೆ ಬ್ಯಾಂಕ್ ಹೆಸರಿನಲ್ಲಿ 50 ಸಾವಿರ ರೂ ವಂಚನೆ ಎಸಗಿದ್ದಾರೆ. ಫಾಸ್ಟ್ ಟ್ಯಾಗ್ ವಿಚಾರವಾಗಿ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮೊದಲ ದೂರು ದಾಖಲಾಗಿದೆ.
ರಾಷ್ಟೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಫಾಸ್ಟ್ಟ್ಯಾಗ್ ಕಡ್ಡಾಯವಾಗಿ ಅಳವಡಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲೇ ಹಲವಾರು ಬ್ಯಾಂಕ್ಗಳು, ಆನ್‌ಲೈನ್ ಮಾರುಕಟ್ಟೆಗಳು ವಿವಿಧ ಆಫರ್ಗಳೊಂದಿಗೆ ಫಾಸ್ಟ್ಟ್ಯಾಗ್ ರಿಚಾರ್ಜ್ ಸೇವೆ ನೀಡುತ್ತಿದೆ.
ಅದರಂತೆ ಫಾಸ್ಟ್ಟ್ಯಾಗ್ ಆನ್ ಲೈನ್ ನಲ್ಲಿ ರಿಚಾರ್ಜ್ ಮಾಡಲು ಹೋದ ರಾಹುಲ್ ತಾಂತ್ರಿಕ ದೋಷ ಕಂಡು ಬಂದಿದೆ. ಈ ಸಂಬಂಧ ಆಕ್ಸಿಸ್ ಬ್ಯಾಂಕ್ನ ಅಧಿಕೃತ ಟ್ವೀಟರ್ ಖಾತೆಗೆ ದೂರು ನೀಡಿದ್ದರು. ಇದಕ್ಕೆ ಕಾಯುತ್ತಿದ್ದ ಆನ್ ಲೈನ್ ವಂಚಕರು ಬ್ಯಾಂಕ್ ಕಸ್ಟಮರ್ ಕೇರ್ ಹೆಸರಿನಲ್ಲಿ ರಾಹುಲ್ಗೆ ಕರೆ ಮಾಡಿದ್ದಾರೆ. ಫಾಸ್ಟ್ಟ್ಯಾಗ್ ಲಿಂಕ್ಗೆ ಸಂಪರ್ಕಿಸಿ ಆ ಮೂಲಕ ಯುಪಿಎ ಪಿನ್ ಕೋಡ್ ಕಳುಹಿಸುವಂತೆ ಹೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳೇ ಕರೆ ಮಾಡಿರುವುದಾಗಿ ಭಾವಿಸಿ ರಾಹುಲ್ ಯುಪಿಎ ನಂಬರ್ ಕೊಟ್ಟಿದ್ದಾರೆ. ನಂಬರ್ ಕೊಡುತ್ತಿದ್ದಂತೆ ಹಂತ ಹಂತವಾಗಿ ಒಟ್ಟು 50 ಸಾವಿರ ರೂ.ಡೆಬಿಟ್ ಮಾಡಿಕೊಂಡು ವಂಚನೆ ಎಸಗಿದ್ದಾರೆ ಐನಾತಿ ಕಳ್ಳರು.
ಸದ್ಯ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.